ಬೊಕ್ಕತಲೆಯಲ್ಲಿ ಕೂದಲು ಕೊನರುವುದೆಂತಯ್ಯ...? ಸುದ್ದಿ ಸೂರಪ್ಪನವರಿಗೆ ವೈದ್ಯರ ಸಮಜಾಯಿಷಿ

| N/A | Published : Feb 03 2025, 11:28 AM IST

Anganavadi New

ಸಾರಾಂಶ

ಸುದ್ದಿ ಸೂರಪ್ಪರು ಮಾಹಿತಿ ನೋಟ್‌ ಮಾಡಿಕೊಳ್ತಾ ಸುದ್ದಿಗೋಷ್ಠಿ ನಡೆಸೋರ ತಲೆಕಡೆ ಒಮ್ಮೆ ನೋಡಿ ಗಾಬರಿ. ಹೀಗೆ ಹೇಳೋರ ತಲೆಯಲ್ಲಿ ಹುಡುಕಿದರೂ ಒಂದೂ ಕೂದಲಿರಲಿಲ್ಲ. ಅಲ್ರಿ ಕೂದಲು ಕೊನರಿಸೋ ಚಿಕಿತ್ಸೆ ಇದೆ ಅಂತ ಹೇಳೋ ನೀವೇ ಬಾಲ್ಡ್‌ಹೆಡ್‌, ಈ ಚಿಕಿತ್ಸೆಯನ್ನ ಜನಾ ನಂಬೋದು ಹೇಗ್ರಿ? ಅಂತ ಕೇಳಿಬಿಡಬೇಕೇ?

ನಮ್ಮ ಆಸ್ಪತ್ರೆಯಲ್ಲಿ ಬಾಲ್ಡ್‌ಹೆಡ್‌ (ಬೊಕ್ಕತಲೆ) ನಲ್ಲೂ ಕೂದಲು ಕೊನರಿಸುವ ಚಿಕಿತ್ಸೆ ನೀಡಲಾಗುತ್ತದೆ ಎಂದು ತಲೆತುಂಬಾ ಕೂದಲಿದ್ದವರು ಹೇಳಿದರೆ ನಂಬೋದು ಸುಲಭ, ಆದ್ರೆ ಈ ಮಾತನ್ನು ಹೇಳೋರೂ ಕೂಡಾ ಬೊಕ್ಕತಲೆನವ್ರಾದ್ರೆ ನಂಬೋದು ಸಾಧ್ಯವೇ?

ಕಲಬುರಗಿಯಲ್ಲಿ ಈಚೆಗೆ ನಡೆದ ಕ್ಲಿನಿಕ್‌ವೊಂದರ ಉದ್ಘಾಟನೆ ಬಗ್ಗೆ ಹೇಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೀಗೊಂದು ಪೇಚಿನ ಪ್ರಸಂಗ ಎದುರಾಯ್ತೆನ್ನಿ!

ತಮ್ಮ ಆಸ್ಪತ್ರೆಯಲ್ಲಿ ಏನೆಲ್ಲ ತೊಂದರೆಗಳಿಗ ಪರಿಣಾಮಕಾರಿ ಚಿಕಿತ್ಸೆ ಇದೆ ಎಂಬುದನ್ನು ಸಾರಿ ಹೇಳಲು ಸುದ್ದಿಗೋಷ್ಠಿ ಕರೆದಿದ್ದ ಆಸ್ಪತ್ರೆ ವೈದ್ಯರು, ಆಡಳಿತಾಧಿಕಾರಿಗಳಿಬ್ಬರೂ ಹಲವು ಸಂಗತಿ ವಿವರಿಸುತ್ತಾ ಕೊನೆಗೆ ಕೂದಲು ಕೊನರಿಸುವ ಚಿಕಿತ್ಸೆ ಬಗ್ಗೆ ತುಂಬ ಇಂಟರೆಸ್ಟಿಂಗ್‌ ಮಾಹಿತಿ ಕೊಟ್ರೆನ್ನಿ.

ಸುದ್ದಿ ಸೂರಪ್ಪರು ಈ ಮಾಹಿತಿ ನೋಟ್‌ ಮಾಡಿಕೊಳ್ತಾ ಸುದ್ದಿಗೋಷ್ಠಿ ನಡೆಸೋರ ತಲೆಕಡೆ ಒಮ್ಮೆ ನೋಡಿ ಗಾಬರಿ, ಹೀಗೆ ಹೇಳೋರ ತಲೆಯಲ್ಲಿ ಹುಡುಕಿದರೂ ಒಂದೂ ಕೂದಲಿರಲಿಲ್ಲ. ಸುದ್ದಿ ಸೂರಪ್ಪರು ಇದನ್ನು ಅಲ್ಲಿಗೆ ಬಿಡದೆ, ಅಲ್ರಿ ಕೂದಲು ಕೊನರಿಸೋ ಚಿಕಿತ್ಸೆ ಇದೆ ಅಂತ ಹೇಳೋ ನೀವೇ ಬಾಲ್ಡ್‌ಹೆಡ್‌, ಈ ಚಿಕಿತ್ಸೆಯನ್ನ ಜನಾ ನಂಬೋದು ಹೇಗ್ರಿ? ಅಂತ ಕೇಳಿಬಿಡಬೇಕೇ?

ಅನಿರೀಕ್ಷಿತ ಈ ಪ್ರಶ್ನೆಗೆ ಆಸ್ಪತ್ರೆಯ ಪರವಾಗಿ ಪ್ರೆಸ್‌ಮೀಟ್‌ ನಡೆಸಿದ್ದ ವೈದ್ಯೆ, ಮ್ಯಾನೇಜರ್‌ ಇಬ್ರೂ ಕಕ್ಕಾಬಿಕ್ಕಿ, ಆದರೂ ಸಾವರಿಸಿಕೊಂಡು, ಅದೆಲ್ಲವೂ ನಮ್ಮಿಷ್ಟ. ನಾವು ಚಿಕಿತ್ಸೆ ತಗೋಬಹುದು, ಬಿಡಬಹುದು, ನಾವು ಬಾಲ್ಡ್‌ಹೆಡ್‌ ಆದ್ರೇನಂತೆ, ನಮ್ಮಲ್ಲಿ ಬರೋ ಬೊಕ್ಕತಲೆಗಳ ತುಂಬಾ ಕೂದಲು ಕೊನರಿಸೋದು ಗ್ಯಾರಂಟಿ ಅಂತ್ಹೇಳಿ ಸುದ್ದಿಸೂರಪ್ಪರ ಟ್ರಿಕ್ಕಿ ಪ್ರಶ್ನೆಗೆ ಸಮಜಾಯಿಷಿ ನೀಡ್ತಾ ಸುದ್ದಿಗೋಷ್ಠಿಗೆ ಮಂಗಳ ಹಾಡಿದರೆನ್ನಿ.

ಅಂಗನವಾಡಿ ಸಂಘಗಳ ಕ್ರೆಡಿಟ್‌ ‘ವಾರ್‌’

ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗೆ ಕೂರುತ್ತಾರೆಂದರೆ ಅದು ಯಾವ ಪಕ್ಷದ ಸರ್ಕಾರವಿರಲಿ, ಬೆಂಡಾಗಲೇಬೇಕು. ಕೆಲವೊಮ್ಮೆ ಸರ್ಕಾರಗಳು ಬೀಸೋದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡರೆ ಸಾಕು ಎಂದು ಹುಸಿ ಆಶ್ವಾಸನೆ ನೀಡಿ ಇವರನ್ನು ತಕ್ಷಣಕ್ಕೆ ಸಾಗ ಹಾಕುವುದೂ ಉಂಟು. ಆದರೆ ಇವರು ಮಾತ್ರ ಉಡದ ಪಟ್ಟು ಸಡಿಲಿಸುವುದಿಲ್ಲ, ಮಾತು ಕೊಟ್ಟ ಸರ್ಕಾರ ಅಥವಾ ಪಕ್ಷ ಅದಕ್ಕೆ ತಕ್ಕಂತೆ ಭವಿಷ್ಯದಲ್ಲಿ ನಡೆದುಕೊಳ್ಳದಿದ್ದರೆ ಸುತಾರಾಂ ಸುಮ್ಮನಿರುವುದೂ ಇಲ್ಲ.

ಇತ್ತೀಚೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯೊಂದು, ಕನಿಷ್ಠ ವೇತನ ನೀಡುವುದಾಗಿ ಸರ್ಕಾರ ಸ್ಪಷ್ಟ ಭರವಸೆ ನೀಡಿದ ನಂತರವಷ್ಟೇ ಅಲ್ಲಿಂದ ಜಾಗ ಖಾಲಿ ಮಾಡಿದ್ದು. ಅಲ್ಲಿಯವರೆಗೂ ಐದು ದಿನ ಜಪ್ಪಯ್ಯ ಎಂದರೂ ಸ್ಥಳ ಬಿಟ್ಟು ಕದಲಲಿಲ್ಲ.

ಅಸಲಿ ವಿಷಯಕ್ಕೆ ಬರುವುದಾದರೆ, ಫೆ.3 ರಿಂದ ಅಂಗನವಾಡಿಯ ಮತ್ತೊಂದು ಸಂಘಟನೆ ಅದೇ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಲಿದೆ. ಅರೆ, ಸರ್ಕಾರ ಕನಿಷ್ಠ ವೇತನದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ಹಿಂಪಡೆದರಲ್ಲವೇ ಎಂಬ ಪ್ರಶ್ನೆ ನಿಮಗೆ ಉದ್ಭವಿಸಬಹುದು. ಆದರೆ ಈ ಸಂಘಟನೆಯದ್ದು ಬೇರೆ ಬೇಡಿಕೆಯಂತೆ... ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ಅನುಷ್ಠಾನಕ್ಕೆ ಆಗ್ರಹಿಸಿ ಬೀದಿಗಿಳಿಯಲಿದೆಯಂತೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಎಲ್ಲ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಭರವಸೆ ನೀಡಿದ ಮೇಲೂ ಮತ್ತೊಂದು ಸಂಘಟನೆಯ ತಕರಾರು ಏನೆಂಬುದು ಮಾತ್ರ ಜನರಿಗೆ ಗೊತ್ತಾಗುತ್ತಿಲ್ಲ. ಪ್ರತಿಭಟನೆ ನಡೆಸಲು ಈ ಮೊದಲೇ ನಿರ್ಧರಿಸಲಾಗಿತ್ತು. ಹಾಗಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಮುಖಂಡರೊಬ್ಬರು ಹೇಳುವ ಮಾತಿಗೆ ಏನು ಹೇಳಬೇಕೋ...

ಇನ್ನಾದರೂ ಕ್ರೆಡಿಟ್‌ ಪಡೆಯುವುದಕ್ಕಾಗಿಯೇ ಹೋರಾಟ ನಡೆಸುತ್ತಾರೆಂಬ ಅಪವಾದದಿಂದ ಮುಕ್ತವಾಗಬೇಕಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿರುವುದು ಮಾತ್ರ ನಿಜ.

-ಶೇಷಮೂರ್ತಿ ಅವಧಾನಿ, ಕಲಬುರಗಿ

-ಸಿದ್ದು ಚಿಕ್ಕಬಳ್ಳೇಕೆರೆ