ವಿಜಯಪುರ: ಮುಂಬರುವ ಒಂದು ವರ್ಷದೊಳಗೆ ಎತ್ತಿನಹೊಳೆ ಹಾಗೂ ಕಾವೇರಿ ೫ನೇ ಹಂತದ ಯೋಜನೆಯ ಮೂಲಕ ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳಿಗೆ ಮಾತ್ರವಲ್ಲದೆ, ಪ್ರತಿ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಪಟ್ಟಣದ ದೇವನಹಳ್ಳಿ ರಸ್ತೆಯ ಬಸವೇಶ್ವರ ನಗರದ ಬಸ್ ನಿಲ್ದಾಣದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ವತಿಯಿಂದ ೨ ಕೋಟಿ ರು. ವೆಚ್ಚದ ರಸ್ತೆ ಡಾಂಬರೀಕರಣ ಹಾಗೂ ಬೆಸ್ಕಾಂ ವತಿಯಿಂದ ೨೫ ಕೋಟಿ ರು. ವೆಚ್ಚದಲ್ಲಿ ಭೂಗತ ಕೇಬಲ್ ಮತ್ತು ಎಲ್‌ಟಿಎಬಿ ಕೇಬಲ್ ಅಳವಡಿಸುವ ಮೂಲಕ ವಿದ್ಯುತ್ ಜಾಲದ ಉನ್ನತೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಕಳೆದ ಚುನಾವಣೆಯಲ್ಲಿ ಪಟ್ಟಣದ ಜನತೆ ನೀಡಿದ ಭಾರಿ ಬಹುಮತವನ್ನು ಸ್ಮರಿಸಿದ ಸಚಿವರು, ಜನತೆಗೆ ಅಗತ್ಯವಿರುವ ಮೂಲ ಸೌಕರ್ಯಗಳಾದ ನೀರು, ವಿದ್ಯುತ್ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಯುಜಿಡಿ (ಒಳಚರಂಡಿ) ಯೋಜನೆಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಎತ್ತಿನಹೊಳೆ ಯೋಜನೆಯಡಿ ಕುಂದಾಣ ಗ್ರಾಮದ ಬಳಿ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಪಟ್ಟಣದ ವೈದ್ಯರ ವರ್ಗಾವಣೆ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು


ಶಾಲೆ ಮತ್ತು ಅಂಗನವಾಡಿಗಳ ಬಿಸಿಯೂಟಕ್ಕೆ ಬೇಳೆಕಾಳು ಪೂರೈಕೆಯಾಗದಿರುವ ಬಗ್ಗೆ ಕ್ರಮ ವಹಿಸಲಾಗುವುದು. ವಿಜಯಪುರದಿಂದ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್ಸುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗುವುದು.

ತ್ಯಾಜ್ಯ ವಿಲೇವಾರಿಗಾಗಿ ಈಗಾಗಲೇ ಸೂಕ್ತ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ಮಂಜುನಾಥ್, ರಾಮಚಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯರಾದ ಎಂ.ಸತೀಶ್ ಕುಮಾರ್, ರಾಜಣ್ಣ, ಇಕ್ಬಾಲ್, ಕೇಶವಪ್ಪ, ಸಿಎಂ ರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜು, ಕಾರ್ಯದರ್ಶಿ ಕೋಕೋ ಕೋಲಾ ಮಂಜುನಾಥ್, ಮುಖಂಡ ಸಂಪತ್ ಕುಮಾರ್ , ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್, ಪುರಸಭಾ ಮಾಜಿ ಸದಸ್ಯರಾದ ಸಂಪತ್ ಕುಮಾರ್, ಮುನಿ ಚಿನ್ನಪ್ಪ, ಹರೀಶ್, ಟೌನ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಫ್ಜಲ್, ಯುವ ಕಾಂಗ್ರೆಸ್ ನ ಹರೀಶ್, ಗಿರೀಶ್, ಆರ್ ಎಂ ಸಿ ಟಿ ಮಂಜುನಾಥ್,ಮಹೇಶ್, ಮುನಿನಾರಾಯಣ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಬೆಸ್ಕಾಂ ಅಧಿಕಾರಿಗಳಾದ ಲಕ್ಷ್ಮಿಕಾಂತ್, ಭವಾನಿ ಶಂಕರ್, ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಞನ್‌)

ವಿಜಯಪುರದ ದೇವನಹಳ್ಳಿ ರಸ್ತೆಯ ಬಸವೇಶ್ವರ ನಗರದ ಬಸ್ ನಿಲ್ದಾಣದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಗುದ್ದಲಿಪೂಜೆ ನೆರವೇರಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಪುರಸಭೆ ಅಧ್ಯಕ್ಷೆ ಭವ್ಯ ಇತರರಿದ್ದರು.