ಸಾರಾಂಶ
ಮಹಿಳೆಯ ಆರ್ಥಿಕ ಮತ್ತು ಹಣಕಾಸು ಸಂಪನ್ಮೂಲ ಹೊಂದುವ ಅವಕಾಶವನ್ನು ಕಿತ್ತುಕೊಳ್ಳುವುದು ಸಹ ಕೌಟುಂಬಿಕ ದೌರ್ಜನ್ಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ಮಹಿಳೆಯ ಆರ್ಥಿಕ ಮತ್ತು ಹಣಕಾಸು ಸಂಪನ್ಮೂಲ ಹೊಂದುವ ಅವಕಾಶವನ್ನು ಕಿತ್ತುಕೊಳ್ಳುವುದು ಸಹ ಕೌಟುಂಬಿಕ ದೌರ್ಜನ್ಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮಹಿಳೆಯೊಬ್ಬರಿಗೆ ಪತಿಯಿಂದ ಹಣಕಾಸು ಪರಿಹಾರ ಕಲ್ಪಿಸಿದ್ದ ಆದೇಶ ರದ್ದುಪಡಿಸಿದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಪೀಠ ಪರಿಹಾರ ನೀಡುವಂತೆ ಆದೇಶಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಲ್ಲದೆ ಪತಿಗಿಂತ ಪತ್ನಿ ವಯಸ್ಸಿನಲ್ಲಿ ಹಿರಿಯಳಾಗಿದ್ದು, ಆ ವಿಚಾರ ತಿಳಿಸಿಲ್ಲ ಎನ್ನುವುದು ವಂಚನೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಮದುವೆಯಾದ ಸಂದರ್ಭದಲ್ಲಿ ಪತ್ನಿ ತವರು ಮನೆಯಿಂದ ತಂದಿದ್ದ ವಸ್ತುಗಳನ್ನು ಹಿಂದಿರುಗಿಸುವುದು ಹಾಗೂ ಬಯೋಡೇಟಾದಲ್ಲಿ (ಸ್ವ-ವಿವರ ಪತ್ರ) ಸುಳ್ಳು ಮಾಹಿತಿ ನೀಡಿರುವುದು ಜೀವನಾಂಶ ನೀಡಲು ಪತಿ ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಅಂತಿಮವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಂತೆ ಪತ್ನಿಗೆ ಮನೆ ಬಾಡಿಗೆಗಾಗಿ ಮಾಸಿಕ ನಾಲ್ಕು ಸಾವಿರ ಮತ್ತು ಜೀವನ ನಿರ್ವಹಣೆಗಾಗಿ ಐದು ಸಾವಿರ ರುಪಾಯಿ ನೀಡುವಂತೆ ಪತಿಗೆ ಆದೇಶಿಸಿದೆ.
ಪತ್ನಿಯನ್ನು ಹೊರಹಾಕಿದ ಪತಿ ಕುಟುಂಬ: ಬೆಂಗಳೂರಿನ ಅರ್ಫಾ ಮತ್ತು ಅಹ್ಮದ್ 2012ರ ಏ.1ರಂದು ಮದುವೆಯಾಗಿದ್ದರು. ಕೆಲ ದಿನಗಳಲ್ಲೇ ಅವರ ಸಂಬಂಧ ಹದಗೆಟ್ಟಿತ್ತು. 2012ರ ಮೇ ತಿಂಗಳಲ್ಲಿ ಅರ್ಫಾ ಅವರನ್ನು ಅಹ್ಮದ್ ಕುಟುಂಬ ಮನೆಯಿಂದ ಹೊರಹಾಕಿತ್ತು. ಇದರಿಂದ ಅರ್ಫಾ ಕೌಟುಂಬಿಕ ದೌರ್ಜನ್ಯ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಾನು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಹಣಕಾಸು ರೂಪದಲ್ಲಿ ಪರಿಹಾರ ಪಾವತಿಸಲು ಪತಿಗೆ ಆದೇಶಿಸುವಂತೆ ಕೋರಿದ್ದರು.
ಕೌಟುಂಬಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿಗೆ ಮನೆ ಬಾಡಿಗೆಗಾಗಿ ಮಾಸಿಕ ನಾಲ್ಕು ಸಾವಿರ ಮತ್ತು ಜೀವನ ನಿರ್ವಹಣೆಗಾಗಿ ಮಾಸಿಕ ಐದು ಸಾವಿರ ರು. ಪಾವತಿಸುವಂತೆ ಅಹ್ಮದ್‌ಗೆ 2014ರ ಜೂ.30ರಂದು ಕೋರ್ಟ್ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅಹ್ಮದ್ ಮೇಲ್ಮನವಿ ಸಲ್ಲಿಸಿದ್ದರು.
ಅದರ ವಿಚಾರಣೆ ನಡೆಸಿದ್ದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಮದುವೆಗೂ ಮುನ್ನ ನೀಡಿದ್ದ ಬಯೋಡೇಟಾದಲ್ಲಿ 22 ವರ್ಷವಾಗಿದ್ದು, ಬಿಎ ವ್ಯಾಸಂಗ ಮಾಡಿರುವುದಾಗಿ ಅರ್ಫಾ ತಿಳಿಸಿದ್ದಾರೆ. ಆದರೆ, ಆಕೆ ಓದಿರುವುದು ಎಸ್ಸೆಸ್ಸೆಲ್ಸಿ ಮಾತ್ರ. ಮದುವೆಯಾದಾಗ ಆಕೆಗೆ 32 ವರ್ಷವಾಗಿತ್ತು. ಅಂದರೆ ಪತಿಗಿಂತ 10 ವರ್ಷ ಹಿರಿಯಳಾಗಿದ್ದು, ಬಯೋಡೇಟಾದಲ್ಲಿ ಸುಳ್ಳು ಮಾಹಿತಿ ನೀಡಿರುವುದು ವಂಚನೆ. ಮೇಲಾಗಿ ದೈಹಿಕ ಹಲ್ಲೆ ಆರೋಪ ಇಲ್ಲದಿರುವುದರಿಂದ ಕೌಟುಂಬಿಕ ದೌರ್ಜನ್ಯ ನಡೆದಿಲ್ಲವೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದುಪಡಿಸಿ 2015ರ ಅ.6ರಂದು ತೀರ್ಪು ನೀಡಿತ್ತು. ಇದರಿಂದ ಅರ್ಫಾ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ದಾಖಲೆ ಪರಿಶೀಲಿಸಿದ ಹೈಕೋರ್ಟ್, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಸೆಕ್ಷನ್ 3 ಪ್ರಕಾರ ‘ಕೌಟುಂಬಿಕ ಹಿಂಸೆ'' ಎಂಬುದು ಹಾನಿ, ಗಾಯಗಳು, ಕಿರುಕುಳ, ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ ಇತ್ಯಾದಿಗಳನ್ನೂ ವ್ಯಾಖ್ಯಾನಿಸುತ್ತದೆ. ಕೌಟುಂಬಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ಸಂತ್ರಸ್ತೆಯು ರಕ್ಷಣಾ ಆದೇಶ, ವಾಸದ ಆದೇಶ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದೆ.
ಇನ್ನು ಪ್ರಕರಣದಲ್ಲಿ ಪತ್ನಿ ಮೇಲೆ ಪತಿಯಿಂದ ಹಲ್ಲೆ ನಡೆದಿರುವುದು ಮ್ಯಾಜಿಸ್ಟ್ರೇಟ್ ಕೋರ್ಟ್ ದೃಢಪಡಿಸಿದ್ದರೂ ಅದನ್ನು ಸೆಷನ್ಸ್ ನ್ಯಾಯಾಲಯ ಅಲ್ಲಗೆಳೆದಿದೆ. ವಿವಾದಿತ ಬಯೋಡೇಟಾದಲ್ಲಿ ಪತ್ನಿಯ ಸಹಿಯೇ ಇರಲಿಲ್ಲ. ಅದು ತನ್ನದಲ್ಲ ಎಂದು ಪತ್ನಿ ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಪತಿಗಿಂತ ತಾನು ಹಿರಿಯಳು ಎಂದು ಒಪ್ಪಿಕೊಂಡಿದ್ದಾಳೆ. ಅದೇ ರೀತಿ ಮನೆಯಿಂದ ಹೊರಹಾಕಿದ ನಂತರ ಪತ್ನಿಗೆ ಪತಿ ಹಣಕಾಸು ನೆರವು ನೀಡಿಲ್ಲ ಹಾಗೂ ಪರಿಹಾರ ಪಾವತಿಸಿಲ್ಲ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ ಪ್ರಕಾರ, ಮಹಿಳೆಯ ಆರ್ಥಿಕ ಮತ್ತು ಹಣಕಾಸು ಸಂಪನ್ಮೂಲ ಕಿತ್ತುಕೊಳ್ಳುವುದು ಸಹ ದೌರ್ಜನ್ಯ. ಆದ್ದರಿಂದ ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪು ಎತ್ತಿಹಿಡಿಯಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.