ಸಾರಾಂಶ
ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಬಿಜೆಪಿಯ ಎಲ್ಲ ಕಾರ್ಯಕರ್ತರು ಇಂದಿನಿಂದಲೇ ಸನ್ನದ್ಧರಾಗಬೇಕು. ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂಬ ಸೂಚನೆ ನೀಡಿದ ಬಿಜೆಪಿ ಕಾರ್ಯಕಾರಿಣಿ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಯಿತು.
ಇದೇ ವೇಳೆ ದೇಶ ಇಬ್ಭಾಗಿವಾಗಿಸುವ ಮಾತನಾಡುತ್ತಿರುವ ಕಾಂಗ್ರೆಸ್ ವಿರುದ್ಧ ಎಲ್ಲರೂ ಹರಿಹಾಯ್ದರು. ದೇಶವನ್ನು ಇಬ್ಭಾಗವಾಗಿಸಲು ದೇಶವೇನು ಇವರಪ್ಪನ ಆಸ್ತಿಯೇ ಎಂದು ಕಿಡಿಕಾರಿದರು.ಇಲ್ಲಿನ ಹೆಬಸೂರು ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ನಡೆಯಿತು. ಚುನಾವಣೆಗೆ ಯಾವ ರೀತಿ ತಯಾರಬೇಕು. ಏನೇನು ತಂತ್ರಗಳನ್ನು ಅನುಸರಿಸಬೇಕು ಎಂಬ ಸೂತ್ರವನ್ನು ನೀಡಿದ ಮುಖಂಡರು, ಪಕ್ಷದಲ್ಲಿದ್ದು ದೂರವಾಗಿರುವ, ಹಳೆಯ ಕಾರ್ಯಕರ್ತರನ್ನು ಮತ್ತೆ ಸೆಳೆಯಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, "ಇಬ್ಭಾಗವಾಗಿಸಲು ದೇಶ ಇವರಪ್ಪನ ಮನೆ ಆಸ್ತಿಯೇ " ಎಂದು ಸಂಸದ ಡಿ.ಕೆ. ಸುರೇಶ ಹೇಳಿಕೆಗೆ ತಿರುಗೇಟು ನೀಡಿದರು.ಕೇಂದ್ರದಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾಗಿಯೇ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆಲ್ಲ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಆರ್ಥಿಕ ಸ್ಥಿತಿ ನಿಭಾಯಿಸಲು ಸಾಧ್ಯವಾಗದ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಧರಣಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ರಸ್ತೆ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ 2814 ಕಿ.ಮೀ ರಸ್ತೆ ನಿರ್ಮಿಸಿದ್ದರೆ, ಈಗಿನ ಬಿಜೆಪಿ ಸರ್ಕಾರ 6500 ಕಿ.ಮೀ ರಸ್ತೆ ನಿರ್ಮಿಸಿದೆ. ಆಯುಷ್ಮಾನ್ ಭಾರತ್, ಜಲ ಜೀವನ ಮಿಷನ್ ಸೇರಿದಂತೆ ಹಲವು ಯೋಜನೆಗಳಿಗೂ ಈಗಿನ ಪ್ರಧಾನಿ ಮೋದಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಮತದಾರರಿಗೆ ಈ ಮಾಹಿತಿ ತಲುಪಿಸಬೇಕು ಎಂದು ತಿಳಿಸಿದರು.ಮೊದಲು 74 ವಿಮಾನ ನಿಲ್ದಾಣಗಳಿದ್ದರೆ, ಈಗ 149 ವಿಮಾನ ನಿಲ್ದಾಣಗಳಾಗಿವೆ. ಸದ್ಯದಲ್ಲೇ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು. ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾಗ ರಾಜ್ಯದ ರೈಲು ಯೋಜನೆಗಳಿಗೆ ₹700 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷ ಬಿಜೆಪಿ ಸರ್ಕಾರ ₹7500 ಕೋಟಿ ನೀಡಿದೆ ಎಂದರು.
ಸಿದ್ದರಾಮಯ್ಯ ಸಿಎಂ ಸ್ಥಾನ ಉಳಿಸಿಕೊಳ್ಳಲು ಬಲ ಪ್ರದರ್ಶನ ಮಾಡುತ್ತಿದ್ದರೆ, ಇತ್ತ ಡಿ.ಕೆ. ಶಿವಕುಮಾರ ಸಿಎಂ ಸ್ಥಾನವನ್ನು ಪಡೆದುಕೊಳ್ಳುವ ಭರದಲ್ಲಿದ್ದಾರೆ. ಒಬ್ಬರಿಗೊಬ್ಬರ ಮೇಲೆ ವಿಶ್ವಾಸ, ನಂಬಿಕೆ ಇಲ್ಲದಂತಾಗಿದೆ. ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂದರುಮಾಜಿ ಶಾಸಕ, ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, 6 ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಹುರುಪಿನಲ್ಲಿದ್ದ ಕಾಂಗ್ರೆಸ್‌ಗೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಶಾಕ್ ನೀಡಿದೆ. ಅಯೋಧ್ಯೆ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ಆ ಪಕ್ಷಕ್ಕೆ ಚುನಾವಣೆಯನ್ನೇ ಮರೆಯುವಂತೆ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಬಂದ್ ಮಾಡುವ ಮಾತು ಅವರಿಗೆ ಬರಲಾರಂಭಿಸಿವೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶವನ್ನು ಇಬ್ಭಾಗಿಸುವ ಮಾತುಗಳನ್ನಾಡಿದ ಡಿ.ಕೆ. ಸುರೇಶ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಧಾರ್ಮಿಕ ಆಚರಣೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ, ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರುಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸಂಜಯ ಕಪಟಕರ ಹಾಲಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರಿಗೆ ಧ್ವಜ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಎಂಎಲ್‌ಸಿ ಪ್ರದೀಪ ಶೆಟ್ಟರ, ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ ಹಾನಗಲ್, ಮಾಜಿ ಶಾಸಕರಾದ ಅಮೃತ ದೇಸಾಯಿ, ಅಶೋಕ ಕಾಟವೆ, ಪ್ರಮುಖರಾದ ಪ್ರಭು ನವಲಗುಂದಮಠ, ಮಹೇಂದ್ರ ಕೌತಾಳ, ಸಂತೋಷ ಚವ್ಹಾಣ, ರವಿ ನಾಯಕ ಇತರರು ಇದ್ದರು.ಶೆಟ್ಟರ್ ಗೈರು
ಶೆಟ್ಟರ್ ಬಿಜೆಪಿ ಸೇರ್ಪಡೆಗೊಂಡ ಬಳಿಕ ಆಯೋಜಿಸಿದ್ದ ಮೊದಲ ಕಾರ್ಯಕಾರಿಣಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗೈರಾಗಿದ್ದರು. ಹುಬ್ಬಳ್ಳಿಯಲ್ಲೇ ಇದ್ದರೂ ಸಭೆಗೆ ಬಂದಿರಲಿಲ್ಲ. ಇದು ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೆಟ್ಟರ ವೈಯಕ್ತಿಕ ಕಾರಣಗಳಿಂದ ಸಭೆಗೆ ಬರಲಾಗುವುದಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದ್ದರು. ಸಭೆಯ ಬಳಿಕ ಭೇಟಿಯಾಗುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ, ಅವರ ಅನುಪಸ್ಥಿತಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.ಗೊಂದಲ ಮರೆಯಿರಿ: ಮಾಜಿ ಸಿಎಂ ಜಗದೀಶ ಶೆಟ್ಟರ ಮರಳಿ ಬಿಜೆಪಿ ಬಂದಿದ್ದಾರೆ. ಪಕ್ಷದಲ್ಲಿನ ಗೊಂದಲ ಮರೆತು ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲ್ಲಿಸಲು ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಮನೆ ಮನೆಗೆ ತಲುಪಿಸುವ ಜತೆಗೆ ಕಂಡು ಕೇಳರಿಯದ ರೀತಿಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.