ಸಾರಾಂಶ
ಭಟ್ಕಳ: ಸಚಿವ ಮಂಕಾಳ ವೈದ್ಯ ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಮುರ್ಡೇಶ್ವರ ಬೆಂಗಳೂರು ಎರಡು ನಾನ್ ಎಸಿ ಸ್ಲೀಪಿಂಗ್ (ಪಲ್ಲಕ್ಕಿ) ಬಸ್ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸ್ ಮಾರಾಟ ಮಾಡಿದ್ದರಿಂದ ಎಲ್ಲ ಕಡೆ ಬಸ್ಸಿನ ಅವ್ಯವಸ್ಥೆ ಆಗಿತ್ತು. ಹಳ್ಳಿ ಹಳ್ಳಿಗಳಲ್ಲಿಯೂ ಬಸ್ಸುಗಳಿಲ್ಲದೆ ಜನರು ತೊಂದರೆ ಅನುಭವಿಸಿದ್ದರು. ಉತ್ತರ ಕನ್ನಡ ಜಿಲ್ಲೆಗೆ 50 ಹೊಸ ಬಸ್ಸುಗಳನ್ನು ತರಲಾಗುತ್ತಿದೆ. ರಿಪೇರಿ ಪಡಿಸಬಹುದಾದ ಬಸ್ಸನ್ನು ರಿಪೇರಿ ಪಡಿಸಿ ಓಡಿಸಲಾಗುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಬಸ್ಸಿನ ಅವ್ಯವಸ್ಥೆ ಸರಿಪಡಿಸುತ್ತಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ಸು ಪ್ರಯಾಣ ಉಚಿತವಾಗಿದ್ದರೂ ನಾವು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಸ್ಸಿನ ಅವ್ಯವಸ್ಥೆ ಸರಿಪಡಿಸುತ್ತಿದ್ದೇವೆ ಎಂದು ಹೇಳಿದರು. ದಿನಂಪ್ರತಿ ₹35 ಲಕ್ಷ ಆದಾಯ ಬರುತ್ತಿದೆ. ಬಸ್ ಚಾಲಕರು, ನಿರ್ವಾಹಕರ ಕೊರತೆ ಇದ್ದು, ಈ ಬಗ್ಗೆಯೂ ಸರ್ಕಾರ ಗಮನಹರಿಸಿದೆ. ಗುತ್ತಿಗೆ ಆಧಾರದಲ್ಲೂ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಶಾಲಾ-ಕಾಲೇಜು ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಗಮನ ಹರಿಸಿದ್ದೇವೆ. ಕೆಲವು ಕಡೆ ವೋಲ್ವೋ ಬಸ್ಸುಗಳನ್ನು ಓಡಿಸಲು ಚಿಂತಿಸಲಾಗಿದೆ ಎಂದರು. ಜಿಲ್ಲಾ ನಿಯಂತ್ರಣಾಧಿಕಾರಿ ಶ್ರೀನಿವಾಸ, ಡಿಪೋ ವ್ಯವಸ್ಥಾಪಕ ದಿವಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಅಲ್ಬರ್ಟ್ ಡಿಕೋಸ್ತ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ವಿಠ್ಠಲ ನಾಯ್ಕ, ಅಬ್ದುಲ್ ಮಜೀದ್ ಶೇಖ್, ನಾರಾಯಣ ನಾಯ್ಕ ಮುಂತಾದವರಿದ್ದರು. ಮುರ್ಡೇಶ್ವರ ಬೆಂಗಳೂರು ಬಸ್ ದಿನಂಪ್ರತಿ ಮುರ್ಡೇಶ್ವರದಿಂದ ಸಂಜೆ 7.15ಕ್ಕೆ ಹೊರಟು ಭಟ್ಕಳ, ಕೊಲ್ಲೂರು, ಶಿವಮೊಗ್ಗ ಮಾರ್ಗವಾಗಿ ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಅದರಂತೆ ಸಂಜೆ ಬೆಂಗಳೂರು ಬಿಟ್ಟು ಬೆಳಗ್ಗೆ ಮುರ್ಡೇಶ್ವರಕ್ಕೆ ತಲುಪಲಿದೆ.