ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಹಳ್ಳಿ ಪಾರ್ವತಾಂಭ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ಜನಸಾಗರದ ನಡುವೆ ಸಂಭ್ರಮ, ಸಡಗರದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಹಳ್ಳಿ ಪಾರ್ವತಾಂಭ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ಜನಸಾಗರದ ನಡುವೆ ಸಂಭ್ರಮ, ಸಡಗರದಿಂದ ಜರುಗಿತು.
ಗ್ರಾಮದಲ್ಲಿ ಕಸಕಲಪುರ ಪಾರ್ವತಾಂಭ ದೇವಿಯ ವಿಗ್ರಹ ಹೊತ್ತ ಹೂವಿನ ತೇರಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಜನರು ಪಾರ್ವತಾಂಭೆಗೆ ಜೈಕಾರ ಹಾಕುತ್ತ ಉತ್ಸಾಹದಿಂದ ಎಳೆದರು. ಈ ಜಾತ್ರೆಗೆ ಸೋಮವಾರ ರಾತ್ರಿಯೇ ಸಾವಿರಾರು ಜಾನುವಾರು ಹಾಗೂ ನೂರಾರು ಎತ್ತಿನಗಾಡಿಯಲ್ಲಿ ಆಗಮಿಸಿದ್ದರು. ಮಂಗಳವಾರ ಮುಂಜಾನೆಯೇ ಪೂಜೆ ಸಲ್ಲಿಸಿ ವಾಪಸ್ ತೆರಳುತ್ತಿದ್ದದ್ದು ಕಂಡು ಬಂತು. ಜಾತ್ರಾ ಮಾಳದಲ್ಲಿ ಬಾಯಿ ಬೀಗ ಹಾಕಿಸಿಕೊಂಡ ನೂರಾರು ಮಂದಿ ಭಕ್ತರು ದೇವಿಯ ಹರಕೆ ತೀರಿಸಿದರು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿಗೆ ಗ್ರಾಮದ ಕೆಲ ಪ್ರಮುಖ ಮುಖಂಡರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.ತಾಲೂಕಿನ ಬಹುತೇಕ ಗ್ರಾಮದ ಜನರು ಎತ್ತಿನ ಗಾಡಿ, ಗೂಡ್ಸ್ ಆಟೋ, ಕಾರು, ಬೈಕ್‌ಗಳಲ್ಲಿ ಆಗಮಿಸಿದರೂ ಹಸಗೂಲಿಯಲ್ಲಿ ಜನ ತುಂಬಿದ್ದರು. ದೇವಿ ದರ್ಶನಕ್ಕೆ ಬಂದ ಸಾವಿರಾರು ಭಕ್ತರು ಗರಗನಹಳ್ಳಿ ಗೇಟ್‌ನಿಂದ ಬಿರು ಬಿಸಿಲಿನಲ್ಲಿ ಭಕ್ತರು ದೇವಸ್ಥಾನದ ತನಕ ನಡೆದು ಸಾಗಿಸಿದರು. ಈ ಜಾತ್ರೆಯ ಮತ್ತೊಂದು ವಿಶೇಷ ಎಂದರೆ ಹರಕೆ ಹೊತ್ತ ಭಕ್ತರು ಸೆವಂತಿಗೆ ಹೂವು ನೀಡುವುದು ವಾಡಿಕೆ. ಹಾಗಾಗಿ ರಥವೆಲ್ಲ ಸೇವಂತಿಗೆ ಹೂವಿದ್ದ ಕಾರಣ ಹೂವಿನ ತೇರಿನಂತೆ ಕಂಡು ಬಂತು.
ಜಾತ್ರಾ ಮಾಳದಲ್ಲಿ ಮಕ್ಕಳ ಆಟಿಕೆ ಸಾಮಾಗ್ರಿ ಹಾಗೂ ಸಿಹಿ ತಿಂಡಿಗಳ ಅಂಗಡಿಗಳು ಪ್ರತ್ಯೇಕ ಕಡೆ ವ್ಯವಸ್ಥೆ ಮಾಡಿದ್ದ ಕಾರಣ ಜನರು ಗ್ರಾಮದಲ್ಲಿ ರಥೋತ್ಸವ ಸಾಗಲು ಅನುಕೂಲವಾಯಿತು. ಎಂದಿನಂತೆ ಜಾತ್ರೆಗೆ ಬರಲು ಗುಂಡ್ಲುಪೇಟೆ ಹಾಗೂ ಗರಗನಹಳ್ಳಿ ಗೇಟ್‌ನಿಂದ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿದ್ದರೂ ಪ್ಯಾಸೆಂಜರ್ ಆಟೋ, ಗೂಡ್ಸ್ ಜನರನ್ನು ಕುರಿಗಳಂತೆ ತುಂಬಿಕೊಂಡು ಸಂಚರಿಸಿದವು.ಶಾಸಕರ ಭೇಟಿ:
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೇರಿದಂತೆ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ ದೇವರ ದರ್ಶನ ಪಡೆದರು. ಬೇಗೂರು ಠಾಣೆಯ ವೃತ್ತ ನಿರೀಕ್ಷಕ ವಿ.ಸಿ.ವನರಾಜ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಚರಣ್ ಗೌಡ ಹಾಗು ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.