ಸಾರಾಂಶ
ತಂಬಾಕು ವಸ್ತುಗಳ ಸೇವನೆಯಿಂದ ವ್ಯಕ್ತಿ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗುತ್ತಾನೆ. ತಂಬಾಕು ವಸ್ತುಗಳನ್ನು ಸೇವಿಸುವುದರಿಂದ ಬದುಕಿನ ವಿನಾಶಕ್ಕೆ ಮುನ್ನುಡಿಯಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದಯಾನಂದ್ ಹೇಳಿದರು.
ಕನ್ನಡಪ್ರಭ ವಾರ್ತೆ ಶೃಂಗೇರಿ
ತಂಬಾಕು ವಸ್ತುಗಳ ಸೇವನೆಯಿಂದ ವ್ಯಕ್ತಿ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗುತ್ತಾನೆ. ತಂಬಾಕು ವಸ್ತುಗಳನ್ನು ಸೇವಿಸುವುದರಿಂದ ಬದುಕಿನ ವಿನಾಶಕ್ಕೆ ಮುನ್ನುಡಿಯಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದಯಾನಂದ್ ಹೇಳಿದರು.ಅವರು ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂಗಡಿಗಳ ಮೇಲೆ ಕೊಟ್ಟಾ ದಾಳಿ ನಡೆಸಿ ದಂಡ ವಿಧಿಸಿ, ನಂತರ ತಂಬಾ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿ ಮಾತನಾಡಿದರು.
ತಂಬಾಕು ಪದಾರ್ಥ ಸೇವಿಸಿದ ವ್ಯಕ್ತಿ ತನ್ನ ಬದುಕನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ, ಕುಟುಂಬ, ಸಮಾಜದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಒಂದು ಕ್ಷಣದ ಮೋಜಿಗಾಗಿ ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾನೆ. ಇತ್ತಿಚಿನ ದಿನಗಳಲ್ಲಿ ಯುವಜನಾಂಗ ಹೆಚ್ಚಾಗಿ ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಂಬಾಕು, ಗುಟ್ಕಾ ಮೊದಲಾದ ತಂಬಾಕುಯುಕ್ತ ವಸ್ತುಗಳು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಿಂದ 100 ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಬಹಿರಂಗವಾಗಿ ತಂಬಾಕು ವಸ್ತು ಪ್ರದರ್ಶಿಸಿ ಸೇವನೆಗೆ ಉತ್ತೇಜನ ನೀಡುವುದು ಅಪರಾಧವಾಗಿದೆ. ಪ್ರವಾಸಿ ತಾಣಗಳಲ್ಲಿಯೂ ತಂಬಾಕು ವಸ್ತುಗಳನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ಅಂಗಡಿ ಮಾಲಿಕರುಗಳು ತಮ್ಮ ಅಂಗಡಿಗಳ ಎದುರು ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ವಸ್ತುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ನಾಮಪಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ತಂಬಾಕು ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಯುವಜನಾಂಗ ಈ ಬಗ್ಗೆ ಹೆಚ್ಚಿನ ಎಚ್ಚರಿಗೆ ವಹಿಸಬೇಕು ಎಂದರು. ಕಿಗ್ಗಾ ಸುತ್ತಮುತ್ತಲ ಅಂಗಡಿಗಳಿಗೆ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಪ್ರದರ್ಶನ ಮಾಡದಂತೆ, ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಋಷ್ಯಶೃಂಗೇಶ್ವರ, ಬೇಬಿ ಮತ್ತಿತರರು ಇದ್ದರು.