ವಕ್ಫ್ ಹೆಸರಿನಲ್ಲಿ ರೈತರ ಜಮೀನು ವಶಕ್ಕೆ ಪಡೆಯುವುದು ನಿಲ್ಲಿಸಿ

| Published : Nov 20 2024, 12:32 AM IST

ವಕ್ಫ್ ಹೆಸರಿನಲ್ಲಿ ರೈತರ ಜಮೀನು ವಶಕ್ಕೆ ಪಡೆಯುವುದು ನಿಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಜಮೀನುಗಳನ್ನು ವಕ್ಫ್ ಹೆಸರಿನಲ್ಲಿ ವಶಕ್ಕೆ ಪಡೆಯುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕೆಂದು ಹಾಗೂ ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಹಾವೇರಿ: ರೈತರ ಜಮೀನುಗಳನ್ನು ವಕ್ಫ್ ಹೆಸರಿನಲ್ಲಿ ವಶಕ್ಕೆ ಪಡೆಯುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕೆಂದು ಹಾಗೂ ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ರಾಜ್ಯಾದ್ಯಂತ ವಕ್ಫ್ ಹೆಸರಿನಲ್ಲಿ ಅಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿವೆ. ಜಿಲ್ಲೆಯ ಹಾನಗಲ್ಲ ತಾಲೂಕಿನ ಹರನಗಿರಿಯಲ್ಲಿ ೧೯೬೪ರಲ್ಲಿ ಮಹ್ಮದಸಾಬ ಇನಾಮದಾರ ಎಂಬುವವರು ರುದ್ರಪ್ಪ ಬಾಳೆಕಾಯಿ ಎಂಬುವವರಿಗೆ ಸುಮಾರು ಆರು ಎಕರೆ ಜಮೀನನ್ನು ಹಣ ನೀಡಿ ಖರೀದಿಸಿದ್ದು, ೨೦೧೫ರವರೆಗೆ ಅವರ ಕುಟುಂಬ ಮೂರನೇ ತಲೆಮಾರಿನವರೆಗೆ ಕೃಷಿ ಮಾಡಿಕೊಂಡು ಉಪಜೀವನ ನಡೆಸಿಕೊಂಡು ಬಂದಿದ್ದಾರೆ.ಆದರೆ ೨೦೧೫ರಲ್ಲಿ ಸದರ ಜಮೀನನ್ನು ವಕ್ಫ್ ಎಂದು ಕಾಲಂ ನಂ.೧೧ರಲ್ಲಿ ಸೇರಿಸುವ ಜೊತೆಗೆ ಮೋಕಾಶಿ ಟ್ರಸ್ಟ್ ಅಲ್ಲಾಪುರ ಎಂದು ಸೇರಿಸಲಾಗಿದೆ. ಅಲ್ಲದೇ ೧೯೬೪ರಲ್ಲಿ ಮಹ್ಮದಸಾಬ ಇನಾಮದಾರ ಜಮೀನು ಖರೀದಿ ನೀಡಿದ್ದು ಇವರ ಮಗ ಮಸ್ಕಿನ್‌ಸಾಬ ಇನಾಮದಾರ ೨೦೧೫ರಲ್ಲಿ ಸದರ ಆಸ್ತಿಯನ್ನು ತಹಶೀಲ್ದಾರ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಪ್ರಭಾವ ಬಳಸಿ ವಕ್ಫ್ ಮತ್ತು ಮೊಕಾಶಿ ಟ್ರಸ್ಟ್ ಎಂದು ಬದಲಾಯಿಸಿದ್ದಾರೆ. ಅಲ್ಲದೇ ಇದು ತಮ್ಮ ಕುಟುಂಬದ ಆಸ್ತಿ ಎಂದು ಸದರ ಜಮೀನಿನಲ್ಲಿದ್ದ ಕಬ್ಬು, ಮೆಕ್ಕೆಜೋಳ ಮತ್ತು ಸೋಯಾಬಿನ್ ಬೆಳೆ ನಾಶ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೂಡಲೇ ಈ ಜಮೀನನ್ನು ಖರೀದಿಸಿದ ಬಾಳಿಕಾಯಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಬೇಕು ಹಾಗೂ ದಾಖಲೆಗಳನ್ನು ಸರಿಪಡಿಸಿ ನೀಡಬೇಕೆಂದು ಆಗ್ರಹಿಸಿದರು.ಈ ವೇಳೆ ವಕ್ಫ್‌ಗೂ ಮೋಕಾಶಿ ಟ್ರಸ್ಟಗೂ ಏನು ಸಂಬಂಧ? ಈ ಜಮೀನನ್ನು ಮೋಕಾಶಿ ಟ್ರಸ್ಟ್ ಎಂದು ಬದಲಾಯಿಸಿದ್ದೇಕೆ ಮತ್ತು ಕಂದಾಯ ಅಧಿಕಾರಿಗಳು ಮುಂದೆ ನಿಂತು ಜಮೀನನ್ನು ಮೊಕಾಶಿ ಟ್ರಸ್ಟ್ ಅಥವಾ ಇನಾಮದಾರ ಕುಟುಂಬದವರಿಗೆ ಹಸ್ತಾಂತರಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ನಷ್ಟಕ್ಕೀಡಾದ ಬಾಳೆಕಾಯಿ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಜಮೀನು ಕಬ್ಜಾ ನೀಡುವಂತೆ ಒತ್ತಾಯಿಸಿದರು.ಅಲ್ಲದೇ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಳೆದ ಮೂರು ವರ್ಷಗಳಿಂದ ಬೆಳೆ ಹಾನಿಗೀಡಾಗಿದ್ದು ಕೂಡಲೇ ಬೆಳೆಹಾನಿ ಪರಿಹಾರ ಮತ್ತು ಬೆಳೆವಿಮೆಯನ್ನು ತುರ್ತಾಗಿ ರೈತರ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿದರು.ಈ ವೇಳೆ ಸಂಘಟನೆಯ ಪ್ರಮುಖರಾದ ರುದ್ರಪ್ಪ ಬಳಿಗಾರ, ಈರಪ್ಪ ಮುದಿಯಪ್ಪನವರ, ರಮೇಶ ದೊಡ್ಡೂರ, ಬಸಯ್ಯ ಹಿರೇಮಠ, ವೀರಭದ್ರಪ್ಪ ಅಗಡಿ, ಮಂಜಣ್ಣ ಕಂಕನವಾಡಿ, ಚಂದ್ರಣ್ಣ ಬಾಮೋಜಿ, ಹಜರತ್‌ಅಲಿ ಪಟ್ಟಣಶೆಟ್ಟಿ, ಮಾರ್ತಾಂಡಪ್ಪ ನೆಗಳೂರ ಇತರರು ಇದ್ದರು.