ನೂತನ ಅಧ್ಯಕ್ಷ ಜೊಲ್ಲೆಗೆ ಅದ್ಧೂರಿ ಸ್ವಾಗತ

| Published : Nov 11 2025, 03:15 AM IST

ಸಾರಾಂಶ

ಬೆಳಗಾವಿ ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ನಗರಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಬೆಳಗಾವಿ ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ನಗರಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯಿತು.

ಅಣ್ಣಾಸಾಹೇಬ ಜೊಲ್ಲೆ ಅವರ ಆಗಮನಕ್ಕಾಗಿ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರು ನಗರದ ಮುನ್ಸಿಪಲ್ ಹೈಸ್ಕೂಲ್ ಹತ್ತಿರ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗುಲಾಲ ಎರಚಿ, ಪಟಾಕಿ ಸಿಡಿಸಿ ಹಾಗೂ ಹೂವಿನ ಸುರಿಮಳೆಯೇ ಸುರಿಸಲಾಯಿತು. ಸಾವಿರಾರು ಕಾರ್ಯಕರ್ತರ ಜಯಘೋಷದ ಜೊತೆಗೆ ನಗರದ ಪ್ರಮುಖ ಬೀದಿಯಿಂದ ಸಾಗಿದ ಈ ಬೃಹತ್ ಮೆರವಣಿಗೆಯು ಬಸ್‌ ನಿಲ್ದಾಣದ ಸಂಭಾಜಿ ರಾಜೇ ವೃತ್ತದ ವರೆಗೆ ಸಾಗಿತು.

ಧನ್ಯವಾದ ತಿಳಿಸಿದ ಜೊಲ್ಲೆ:

ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊದಲಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಹಾಗೂ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ತದನಂತರ ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೇ ಅವರ ಸಹಕಾರ ಅತ್ಯಮೂಲ್ಯವಾಗಿದ್ದು ಎಂದು ನೆನೆಸುತ್ತಾ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಅವರ ಸಹಕಾರಕ್ಕೆ ಧನ್ಯವಾದಗಳು ತಿಳಿಸಿದರು. ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ಪಕ್ಷ ಭೇದ ಮರೆತು ತಾವೆಲ್ಲ ಒಂದಾಗಿ ಈ ಚುನಾವಣೆಯಲ್ಲಿ ಹೋರಾಡಿದ್ದೇವೆ. ಈ ಭಾಗದ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬೆಳೆಯಲು ತಾವೆಲ್ಲರೂ ಶ್ರಮಿಸುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಹಾಗೂ ಈ ಭಾಗದ ಜನರ ಅಭಿವೃದ್ಧಿಗೆ ತಾವೆಲ್ಲರೂ ಪಕ್ಷಭೇದ ಮರೆತು ಒಂದಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಯಾವುದೇ ರಾಜಕಾರಣ ಮಾಡದೆ ಕೇವಲ ಮತ್ತು ಕೇವಲ ಇಲ್ಲಿನ ಜನರ ಒಳಿತಿಗಾಗಿ ಕಾರ್ಯ ಮಾಡಲಾಗುವುದು ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ಅನ್ನು ಕರ್ನಾಟಕದಲ್ಲಿಯೆ ನಂಬರ್ ಒಂದು ಸ್ಥಾನಕ್ಕೆ ತೆಗೆದುಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದರು.

ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೆ ಅವರು ಮಾತನಾಡುತ್ತಾ ಚಿಕ್ಕೋಡಿ ಜಿಲ್ಲೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡು ದೊರಕಿದ್ದು ಇದು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ತಿಳಿಸಿದರು. ಜಾರಕಿಹೊಳಿ ಹಾಗೂ ಜೊಲ್ಲೆ ಕುಟುಂಬವು ಎಂದಿಗೂ ಜನರ ಸೇವೆಗಾಗಿ ಸಿದ್ಧ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಇಲಾಖೆ ವತಿಯಿಂದ ಖಡಕ್ ಬಂದೊಬಸ್ತ ಮಾಡಲಾಗಿತ್ತು.