ಸಾರಾಂಶ
ಕಳೆದ ೬ ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದೂವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿರುವ ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಸೋಮವಾರಪೇಟೆ ರೈತರಿಂದ ವಿಷದ ಬಾಟಲಿ ಹಿಡಿದು ಧರಣಿ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಕಳೆದ ೬ ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದೂವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿರುವ ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ಸ.ನಂ.೧೮/೯, ೧೧೮/೧೨, ಶುಂಠಿ ಗ್ರಾಮದ ಸ.ನಂ.೨೪/೨೮, ಅಬ್ಬೂರುಕಟ್ಟೆ ಹಿತ್ತಲುಮಕ್ಕಿ ಗ್ರಾಮದ ಸ.ನಂ.೮/೧೩, ತಾಕೇರಿ ಗ್ರಾಮದ ಸ.ನಂ.೧/೪, ಬಸವನಕೊಪ್ಪ ಗ್ರಾಮದ ಸ.ನಂ. ೧/೩, ಚಿಕ್ಕಬ್ಬೂರು ಗ್ರಾಮದ ೩/೩೨ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಪೋಡಿ ದುರಸ್ತಿಗಾಗಿ ೨೦೧೮ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ದುರಸ್ತಿ ಆಗಿಲ್ಲ. ೨೦೨೩ರಲ್ಲಿ ತಾಲೂಕು ಕಚೇರಿ ಎದುರು ೨ ಬಾರಿ ಧರಣಿ ಮಾಡಲಾಗಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.ಈ ಹಿಂದೆ ಧರಣಿ ನಡೆದ ಸಂದರ್ಭ ಸ್ಥಳಕ್ಕೆ ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಭೇಟಿ ನೀಡಿ, ಒಂದು ತಿಂಗಳ ಒಳಗೆ ಪೋಡಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಎರಡೂವರೆ ವರ್ಷವಾದರೂ ಇದೂವರೆಗೆ ಯಾವುದೇ ದುರಸ್ತಿ ಆಗಿರುವುದಿಲ್ಲ ಎಂದು ಧರಣಿನಿರತರ ಪರವಾಗಿ ರೈತಪರ ಹೋರಾಟಗಾರರಾದ ಬಿ.ಪಿ.ಅನಿಲ್ ಕುಮಾರ್ ಹೇಳಿದರು.ಕಂದಾಯ ಇಲಾಖೆಯಲ್ಲಿ ಬಡ ರೈತರ ಕೆಲಸಗಳು ಉಚಿತವಾಗಿ ಆಗುತ್ತಿಲ್ಲ. ಪೋಡಿ ದುರಸ್ತಿ ಆಗುವ ತನಕ ಆಹೋರಾತ್ರಿ ಧರಣಿ ನಡೆಯಲಿದೆ. ಕಂದಾಯ ಇಲಾಖೆಯ ಶೋಷಣೆಯಿಂದ ರೈತರಿಗೆ ಅನಾಹುತವಾದರೆ ಕಂದಾಯ ಇಲಾಖೆಯೇ ನೇರ ಹೊಣೆ ಹೊರಬೇಕು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.ಲಂಚ ಕೊಟ್ಟರೆ ಮಾತ್ರ ಕೆಲಸ: ಆರೋಪ
ಕಳೆದ ಇಪ್ಪತ್ತು ವರ್ಷಗಳಿಂದ ಆಗದ ಕೆಲಸವನ್ನು ಬೆಂಗಳೂರಿನ ಉದ್ಯಮಿಗಳಿಗೆ ಕೇವಲ ಮೂರು ತಿಂಗಳಲ್ಲಿ ದಾಖಲಾತಿ ಮಾಡುತ್ತಾರೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ರೈತರಿಗೆ ಮಾಡಿಕೊಡುವುದಿಲ್ಲ. ಒಂದು ಸರ್ವೆ ನಂಬರ್‌ನಲ್ಲಿ ಇಬ್ಬರಿಗೆ ಮಾತ್ರ ಮಾಡುವುದಾದರೆ, ಉಳಿದವರಿಗೆ ಏಕೆ ಆಗುತ್ತಿಲ್ಲ. ಇಲ್ಲಿ ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸ ಆಗುತ್ತದೆ. ಅದು ಬಿಟ್ಟು ಒಂದು ಸಣ್ಣ ಕೆಲಸವೂ ಕಂದಾಯ ಇಲಾಖೆಯಲ್ಲಿ ಆಗುವುದಿಲ್ಲ. ನಾವು ಲಂಚ ನೀಡಲು ನಮ್ಮಲ್ಲಿ ಕೊಳ್ಳೆ ಹೊಡೆದ ಹಣವಿಲ್ಲ ಎಂದು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿಯವರಿಗೆ ಏರು ಧ್ವನಿಯಲ್ಲಿ ಬಿ.ಪಿ.ಅನಿಲ್ ಕುಮಾರ್ ಹೇಳಿದರು. ಪರಿಹಾರ ಸಿಗದಿದ್ದರೆ ನಾವು ವಿಷ ಕುಡಿದು ಸಾಯುತ್ತೇವೆ, ನಮ್ಮ ಸಾವಿಗೆ ಕಂದಾಯ ಇಲಾಖೆಯೇ ಕಾರಣ ಎಂದರು.ದುರಸ್ತಿ ಆಗದ ಐದು ಫೈಲುಗಳ ಕುರಿತು ತನಿಖೆ ಮಾಡಿದರೆ ಅರ್ಧದಷ್ಟು ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯ ನೌಕರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕಾಗುತ್ತದೆ. ನಂತರ ಸಿಬ್ಬಂದಿ ಸಸ್ಪೆಂಡ್ ಆಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಭರತ್ ಕುಮಾರ್ ಮಾತನಾಡಿ, ಸಣ್ಣ ಹಿಡುವಳಿದಾರರಿಗಾದರೂ ಕೂಡಲೇ ಮಾಡಿಕೊಡಿ, ನಂತರ ದೊಡ್ಡ ಹಿಡುವಳಿದಾರರ ದುರಸ್ತಿ ಮಾಡಿ ಎಂದು ಎಸಿ ಯವರಿಗೆ ಹೇಳಿದರು.ತಹಸೀಲ್ದಾರ್ ಸಷ್ಪನೆ:
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಕೃಷ್ಣಮೂರ್ತಿ, ಐದು ಫೈಲುಗಳನ್ನು ಸಮಿತಿಯ ಸಭೆಯಲ್ಲಿ ಪೆಂಡಿಂಗ್ ಇಡಲಾಗಿದೆ. ಮುಂದೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಸದ್ಯದಲ್ಲೇ ಗೈರು ವಿಲೇ ಸಮಿತಿ ಸಭೆ ಕರೆಯಲಾಗುವುದು ಎಂದು ತಿಳಿಸಿದಾಗ, ರೈತರು ಇನ್ನೂ 24 ಗಂಟೆಯೊಳಗೆ ಸಭೆಯನ್ನು ಕರೆಯಲು ಆಗ್ರಹಿಸಿದರು.ರೈತ ಸಮಿತಿಯ ಪದಾಧಿಕಾರಿಗಳಾದ ಜಿ.ಎಂ.ಹೂವಯ್ಯ,ಎಸ್.ಬಿ.ಭರತ್ ಕುಮಾರ್, ಕೆ.ಬಿ.ಸುರೇಶ್, ಕೆ.ಎಂ.ಲಕ್ಷ್ಮಣ, ಅನಂತರಾಮ್, ಕೆ.ಎಂ. ಲೋಕೇಶ್, ಕೆ.ಟಿ.ಪರಮೇಶ್, ಹಿರಿಕರ ರಮೇಶ್, ಮುಖಂಡರಾದ ನಾಪಂಡ ಮುತ್ತಪ್ಪ, ಎಸ್.ಎಂ.ಡಿಸಿಲ್ವಾ,ಮಚ್ಚಂಡ ಅಶೋಕ್ ಮತ್ತಿತರರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))