ಸಾರಾಂಶ
ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲಾದ್ಯಂತ ಪ್ರಥಮ ಪೂಜಿತನಾಗಿರುವ ವಿಘ್ನನಿವಾರಕ ಗಣೇಶನನ್ನು ಜನರು ಸಡಗರ, ಸಂಭ್ರಮದಿಂದ ಬರಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಪೂಜಿಸಿ ಪ್ರತಿಷ್ಠಾಪನೆ ಮಾಡಿದರು.
ಸಂಭ್ರಮದಿಂದ ಮೆರವಣಿಗೆ ಮೂಲಕ ಸ್ವಾಗತ, ಗಣೇಶನ ಪ್ರತಿಷ್ಠಾಪನೆ । ಜಿಲ್ಲಾದ್ಯಂತ ಮನೆ ಮಾಡಿದ ಗಣೇಶೋತ್ಸವದ ಸಡಗರ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲಾದ್ಯಂತ ಪ್ರಥಮ ಪೂಜಿತನಾಗಿರುವ ವಿಘ್ನನಿವಾರಕ ಗಣೇಶನನ್ನು ಜನರು ಸಡಗರ, ಸಂಭ್ರಮದಿಂದ ಬರಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಪೂಜಿಸಿ ಪ್ರತಿಷ್ಠಾಪನೆ ಮಾಡಿದರು.ಗಣೇಶ ಚತುರ್ಥಿ ಪ್ರಯುಕ್ತ ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಸಹ ಸಂಭ್ರಮ ಮೂಡಿತ್ತು. ಹಬ್ಬದ ಪ್ರಯುಕ್ತ ಜನರು ತಮ್ಮ ಮನೆಯನ್ನು ಮೊದಲೇ ಶುಚಿಯಾಗಿಟ್ಟುಕೊಂಡು ಗಣೇಶ ಪ್ರತಿಷ್ಠಾಪನೆ ಸ್ಥಳ ಅಲಂಕರಿಸಿದ್ದರು. ಮನೆಗೆ ತೋರಣ, ಹೂ ಗುಚ್ಚ ಕಟ್ಟು ಶೃಂಗರಿಸಿದ್ದರು. ಇನ್ನೂ ಕೆಲವು ಕಡೆ ಕಾಲನಿ, ಮುಖ್ಯ ರಸ್ತೆಗಳಲ್ಲಿ ವಾರ್ಡ್, ಕಾಲನಿ ಯುವಕರು, ಜನರು ಸೇರಿಕೊಂಡು ದೊಡ್ಡ ಪ್ರಮಾಣದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲು ದೊಡ್ಡ ದೊಡ್ಡ ತಾತ್ಕಾಲಿಕ ತಗಡಿನ ಮಂದಿರ ನಿರ್ಮಾಣ ಮಾಡಿ ಶೃಂಗರಿಸಿದ್ದರು.
ಗಣೇಶ ಚತುರ್ಥಿ ದಿನ ಬೆಳ್ಳಂ ಬೆಳಗ್ಗೆಯಿಂದ ಗಣೇಶನನ್ನು ಜನರು ಮೆರವಣಿಗೆ ಮೂಲಕ ಕರೆತಂದರು. ಕೆಲವರು ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮಾಡುತ್ತಾ ಗಣೇಶನನ್ನು ಸ್ವಾಗತಿಸಿದರು. ದೊಡ್ಡ ದೊಡ್ಡ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮಾಡುವ ಮೂಲಕ ತರಲಾಯಿತು. ರಸ್ತೆಯುದ್ದಕ್ಕೂ ಗಣೇಶ ಮೂರ್ತಿ ಮುಂದೆ ಪಟಾಕಿ ಸಿಡಿಸುತ್ತಾ, ಕುಣಿದು ಕುಪ್ಪಳಿಸುತ್ತಾ ಜನರು ಗಣೇಶೋತ್ಸವದಲ್ಲಿ ಭಾಗಿಯಾದರು.ಶ್ರದ್ಧಾಭಕ್ತಿಯ ಪೂಜೆ:ಗಣೇಶನನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡ ಜನರು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಮನೆಯಲ್ಲಿ ನಾನಾ ಹೂವು, ಹಣ್ಣುಗಳನ್ನು ತಂದು ತರಹೇವಾರಿ ಸಿಹಿ ತಿನಿಸಿ ಮಾಡಿ ವಿಶೇಷವಾಗಿ ಕರೆದ ಕಡುಬು ಮಾಡಿ ನೈವೇದ್ಯ ಮಾಡಿ ಅರ್ಪಿಸಿದರು.
ಕೊಪ್ಪಳ ನಗರದಲ್ಲಿ ಅಗಣಿತ ಸಂಖ್ಯೆಯಲ್ಲಿ ಪ್ರತಿ ಕಾಲನಿಯಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಯನ್ನು ಸ್ಥಳೀಯರು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಕೊಪ್ಪಳದ ಅನೇಕ ಕಡೆ ವಿಶೇಷವಾದ ಗಣಪತಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ.ಗಣಪತಿಯ ವಾಹನ ಇಲಿಗೂ ಸಂದ ಪೂಜೆ:
ಗಣಪತಿ ಪ್ರತಿಷ್ಠಾಪಿಸಿ ಪೂಜಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ಗಣೇಶ ಚತುರ್ಥಿ ಮರುದಿನ ಗಣೇಶನ ವಾಹನ ಇಲಿಯನ್ನೂ ಪ್ರತಿಷ್ಠಾಪಿಸಿ ಸಂಭ್ರಮದಿಂದ ಪೂಜಿಸುತ್ತಾರೆ.ಕೊಪ್ಪಳ ಸಮೀಪದ ಭಾಗ್ಯನಗರದ ನೇಕಾರರು ಗಣಪತಿ ವಾಹನ ಇಲಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಪ್ರದಾಯ ಹೊಂದಿದ್ದಾರೆ. ನೇಕಾರರು ಇಲಿಯ ಮೂರ್ತಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದ್ದಾರೆ. ಭಾಗ್ಯನಗರದಲ್ಲಿ ಪ್ರತಿ ವರ್ಷ ನೇಕಾರರು ಇಲಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷ ಸಹ ಇಲಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಣಪತಿ ಹಾಗೂ ಗಣೇಶನ ವಾಹನ ಇಲಿಗೆ ಪೂಜೆ ಸಲ್ಲಿಸುವುದು ಸಹ ಇಲ್ಲಿನ ವಿಶೇಷವಾಗಿದೆ.