ಸಾರಾಂಶ
-ಕಲ್ಬುರ್ಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ: ಇಲಾಖೆ ಅಧಿಕಾರಿಗಳೊಂದಿಗೆ ಡಿಸಿ ಡಾ. ಸುಶೀಲಾ ಸಭೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬರುವ ಏಪ್ರಿಲ್ ಮೊದಲ ವಾರದಲ್ಲಿ ಕಲ್ಬುರ್ಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಇದರ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಬುರ್ಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳದ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಕಲಬುರಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ ಇದಾಗಿದ್ದು, ನಿರುದ್ಯೋಗಿ ಯುವಜನಾಂಗಕ್ಕೆ, ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಳ್ಳುವ ಮೂಲಕ ಉದ್ಯೋಗದ ಲಾಭ ಪಡೆಯುವಂತೆ ಸಲಹೆ ನೀಡಿದರು.ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್, ಗ್ರಾಮವಾರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಾರ್ಡವಾರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿ, ಪಾಲಿಟೆಕ್ನಿಕ್, ಐಟಿಐ, ಡಿಪ್ಲೊಮಾ, ವಿವಿಧ ಕಾಲೇಜುಗಳ ವ್ಯಾಪ್ತಿಯಲ್ಲಿ ನಿರಂತರ ಅರಿವು ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಮೇಳದ ಕುರಿತು ಪ್ರಚಾರ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕು. ಈ ಜಿಲ್ಲೆಯ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ನೋಂದಣಿ ಮಾಡಿಕೊಂಡವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ತರಬೇತುಗೊಳಿಸಿ ನೆರವಾಗಬೇಕು. ಸಣ್ಣ, ವ್ಯವಹಾರ, ವ್ಯಾಪಾರಸ್ಥರು, ವಲಸಿಗರು ಹೆಚ್ಚಾಗಿರುವದರಿಂದ ಯುವಜನಾಂಗಕ್ಕೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ನೆರವಾಗಬೇಕು. ಕಂಪನಿಗಳ ಕೌಶಲ್ಯ ಅವಶ್ಯಕತೆಗಳ ಅನುಗುಣವಾಗಿ ತರಬೇತಿಗೊಳಿಸಿದಲ್ಲಿ ಸೂಕ್ತ ಎಂದ ಅವರು, ಉದ್ಯೋಗ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ತಾ.ಪಂ, ನಗರಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು, ನಗರಸಭೆ ಆಯುಕ್ತರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.ಅಭ್ಯರ್ಥಿಗಳ ನೋಂದಣಿಗೆ ಅವಕಾಶ
ಕಲ್ಯಾಣ ಕರ್ನಾಟಕ ಅಧೀನದಲ್ಲಿ ಬರುವ 7 ಜಿಲ್ಲೆಗಳು ಹಾಗೂ ಇತರೆ ಜಿಲ್ಲೆಗಳಿಂದಲೂ 200ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲ ತಾಲೂಕಿನ ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮಾ, ಯಾವುದೇ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ ನಿರುದ್ಯೋಗ ಯುವಕ ಯುವತಿಯರಿಗೆ ವಿವಿಧ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಿದ್ದು, ಪ್ರತಿಯೊಬ್ಬರು www.skillconnect.koushalkar.com ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, “ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್ ಸಹಾಯಕ ನಿರ್ದೇಶಕ ಶೀ ಬಸಪ್ಪ ತಳವಡಿ (9880072695) ಅವರನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.ಸಭೆಯಲ್ಲಿ ಜಿ.ಪಂ.ಸಿಇಒ ಲವೀಶ್ ಒರಡಿಯಾ, ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
-----28ವೈಡಿಆರ್1: ಕಲ್ಬುರ್ಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳದ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಸಭೆ ನಡೆಸಿದರು.