ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಮಾದರಿಯಲ್ಲೇ ರಾಜ್ಯದ ಇತರೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ‘ಬಿ’ ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಿಗೆ ‘ಎ’ ಖಾತಾ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಮಾದರಿಯಲ್ಲೇ ರಾಜ್ಯದ ಇತರೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ‘ಬಿ’ ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಿಗೆ ‘ಎ’ ಖಾತಾ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಸಂಬಂಧಿಸಿದ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಿಗೆ ‘ಬಿ’ ಖಾತಾ ನೀಡಲಾಗಿದೆ. ಅಂಥ ಸುಮಾರು 10 ಲಕ್ಷ ಆಸ್ತಿಗಳು ರಾಜ್ಯದಲ್ಲಿವೆ ಎಂದು ಅಂದಾಜಿಸಲಾಗಿದೆ. ಇದೀಗ ಅವುಗಳಿಗೂ ಜಿಬಿಎ ಮಾದರಿಯಲ್ಲೇ ಮಾನದಂಡ ಜಾರಿಗೊಳಿಸಿ ‘ಎ’ ಖಾತಾ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿರುವ ‘ಬಿ’ ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳ ಮಾಲೀಕರಿಗೆ ಅವರ ಆಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ನಿರ್ದಿಷ್ಟ ಪ್ರಮಾಣದ ಶುಲ್ಕ ಪಾವತಿಸಿ ‘ಎ’ ಖಾತಾ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಅದೇ ಮಾದರಿ ಉಳಿದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಜಾರಿಗೆ ತರಲಾಗುತ್ತದೆ. ಎಷ್ಟು ವಿಸ್ತೀರ್ಣದವರೆಗಿನ ಹಾಗೂ ಯಾವ ರೀತಿಯ ಆಸ್ತಿಗಳಿಗೆ ಈ ಅವಕಾಶ ನೀಡಬೇಕು ಎಂಬ ಮಾನದಂಡಗಳನ್ನು ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಿದ್ಧಪಡಿಸಿ ಆದೇಶ ಮಾಡಲಿದೆ ಎಂದು ತಿಳಿಸಿದರು.
ಇದು ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಿದಂತಾಗುವುದಿಲ್ಲವೇ, ಜಿಬಿಎ ವ್ಯಾಪ್ತಿಯಲ್ಲಿ ಜಾರಿ ಮಾಡಿರುವ ಈ ಅವಕಾಶಕ್ಕೆ ಯಾವುದೇ ಕಾನೂನು ತೊಡಕು ಎದುರಾಗಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಕ್ರಮ-ಸಕ್ರಮಕ್ಕೂ ಇದಕ್ಕೂ ಸಂಬಂಧ ಇಲ್ಲ. ಇದೊಂದು ಖಾತಾ ಬದಲಾವಣೆ ಪ್ರಕ್ರಿಯೆ ಅಷ್ಟೆ ಎಂದರು.
ಈ ನಿರ್ಧಾರದಿಂದ ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರಿಗೆ ನಿರಾಳತೆ ಮೂಡಿದೆ.--
ಅಕ್ರಮ-ಸಕ್ರಮಕ್ಕಲ್ಲ ತೆರಿಗೆ ಹೆಚ್ಚಳಕ್ಕಷ್ಟೇ ಅನುಕೂಲ?
ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಿ-ಖಾತಾ ಆಸ್ತಿಗಳ ದಾಖಲೆ ನಿರ್ವಹಣೆ ಮಾಡಿ ತೆರಿಗೆ ಸಂಗ್ರಹಿಸುತ್ತಿದ್ದರೂ ಆಸ್ತಿ ಮಾರಾಟ, ಬ್ಯಾಂಕ್‌ಗಳ ಸಾಲಸೌಲಭ್ಯ ಸೇರಿ ಮತ್ತಿತರ ಅವಕಾಶಗಳಿಗೆ ಸಮಸ್ಯೆಯಾಗಿದೆ. ಜೊತೆಗೆ ನಗರದ ಕೇಂದ್ರ ಭಾಗದಲ್ಲಿರುವ ಇಂಥ ಆಸ್ತಿಗಳಿಗೆ ನೀರು, ವಿದ್ಯುತ್, ರಸ್ತೆಯಂಥ ಮೂಲ ಸೌಕರ್ಯ ಇದ್ದರೂ, ನಗರ ವ್ಯಾಪ್ತಿಯ ಆದರೆ ಹೊರಭಾಗದ ಆಸ್ತಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ‘ಎ’ ಖಾತಾ ನೀಡುವುದರಿಂದ ಇವುಗಳಿಗೆಲ್ಲ ಪರಿಹಾರ ಸಿಗಲಿದೆ.
ಆದರೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್, ಫ್ಲಾಟ್ ಗಳಿಗೆ ‘ಎ’ ಖಾತಾ ನೀಡಿದಾಕ್ಷಣ ಸಕ್ರಮ ಆಗುವುದಿಲ್ಲ. ಅಕ್ರಮ-ಸಕ್ರಮ ಅಂತಿಮವಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ತೀರ್ಪಿಗೆ ಒಳಪಡುತ್ತದೆ. ‘ಎ’ ಖಾತಾ ಆಗಲಿ ‘ಬಿ’ ಖಾತಾ ಆಗಲಿ ಎರಡೂ ತೆರಿಗೆ ಸಂಗ್ರಹಿಸುವುದಕ್ಕಾಗಿ ಸರ್ಕಾರ ಮಾಡಿರುವ ಕ್ರಮ. ಆದರೆ, ನಗರ ಪ್ರದೇಶದ ಬಹುತೇಕ ‘ಬಿ’ ಖಾತಾ ಆಸ್ತಿಗಳಿಗೂ ‘ಎ’ ಖಾತಾ ಆಸ್ತಿಗಳಿಗೆ ನೀಡುತ್ತಿರುವ ಮೂಲಸೌಕರ್ಯಗಳನ್ನು ಸರ್ಕಾರದಿಂದ ಕಲ್ಪಿಸಲಾಗಿದೆ. ಆದರೆ, ಎ ಖಾತಾ ಆಸ್ತಿಗಳಿಗೆ ವಿಧಿಸುತ್ತಿರುವ ತೆರಿಗೆಗೂ, ‘ಬಿ’ ಖಾತಾ ಆಸ್ತಿಗಳಿಗೆ ವಿಧಿಸುತ್ತಿರುವ ತೆರಿಗೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಅವುಗಳನ್ನು ‘ಎ’ ಖಾತಾಗೆ ಪರಿವರ್ತಿಸುವುದರಿಂದ ಸರ್ಕಾರಕ್ಕೆ ಒಂದಷ್ಟು ಖಾತಾ ಬದಲಾವಣೆ ಆದಾಯ ಜೊತೆಗೆ ಪ್ರತೀ ವರ್ಷ ಅವುಗಳಿಂದ ವಸೂಲಿ ಮಾಡುವ ಆಸ್ತಿ ತೆರಿಗೆಯೂ ಹೆಚ್ಚಾಗಲಿದೆ ಎಂದು ಮೂಲಗಳು ಹೇಳುತ್ತವೆ.
33 ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು
ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 33 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಇದೇ ವೇಳೆ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಈ 33ರ ಕೈದಿಗಳ ಪೈಕಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋಕಾಕ್ ತಾಲೂಕಿನ ಭೀಮಪ್ಪ, ಕೋಲಾರ ಜಿಲ್ಲೆಯ ಫೈರೋಜ್ ಖಾನ್ ಎಂಬ ಇಬ್ಬರ ಬಿಡುಗಡೆಗೂ ಮುನ್ನ ಸಶಸ್ತ್ರ ಕಾಯ್ದೆ ಅನುಸಾರ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ. ಇದಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ಬರೆಯಲಾಗುವುದು. ಉಳಿದ 31 ಮಂದಿಯನ್ನು ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಂಡು ಬಿಡುಗಡೆ ಮಾಡಲಿದೆ ಎಂದರು.
ಏಕೆ ಈ ತೀರ್ಮಾನ?
- ಎ ಖಾತಾ ಆಸ್ತಿಗಳ ರೀತಿಯೇ ಬಿ ಖಾತಾ ಆಸ್ತಿಗಳಿಗೂ ಸರ್ಕಾರ ಮೂಲಸೌಕರ್ಯ ಕಲ್ಪಿಸಿದೆ
- ಆದರೆ ಎ ಖಾತಾ ಆಸ್ತಿಗಳಿಗೆ ವಿಧಿಸುತ್ತಿರುವ ತೆರಿಗೆಗೂ ಬಿ ಖಾತಾ ಆಸ್ತಿ ತೆರಿಗೆಗೂ ವ್ಯತ್ಯಾಸವಿದೆ
- ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಿದರೆ ತೆರಿಗೆ ವಸೂಲಿಯೂ ಹೆಚ್ಚಾಗಲಿದೆ
--ವಿಸ್ತೀರ್ಣದ ಬಗ್ಗೆಶೀಘ್ರವೇ ಆದೇಶ
ಎಷ್ಟು ವಿಸ್ತೀರ್ಣದವರೆಗಿನ ಹಾಗೂ ಯಾವ ರೀತಿಯ ಆಸ್ತಿಗಳಿಗೆ ಎ ಖಾತಾ ಅವಕಾಶ ನೀಡಬೇಕು ಎಂಬ ಮಾನದಂಡಗಳನ್ನು ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಿದ್ಧಪಡಿಸಿ ಆದೇಶ ಮಾಡಲಿದೆ.
ಯಾರಿಗೆ ಸಿಗಲಿದೆ
ಎ ಖಾತಾ ಸೌಲಭ್ಯ?ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರದ ಅನುಮೋದನೆ ಪಡೆಯದೆ ನಿರ್ಮಾಣವಾಗಿರುವ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳು ಈಗಾಗಲೇ ‘ಬಿ’ ಖಾತಾ ಪಡೆದಿದ್ದರೆ, ಅಂತಹ ಆಸ್ತಿಗಳಿಗೆ ಈಗ ಎ ಖಾತಾ.