ವಿಶೇಷ ಚೇತನರ ಹಕ್ಕು,ಸೌಲಭ್ಯಗಳಿಗೆ ಸ್ಪಂದಿಸುವಂತೆ ಸರ್ಕಾರ ಹಾಗು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ವಿಶೇಷ ಚೇತನರ ಹಕ್ಕು, ಸೌಲಭ್ಯ ಹಾಗೂ ಗೌರವಯುತ ಜೀವನಕ್ಕಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಇನ್ನಷ್ಟು ಸ್ಪಂದಿಸಬೇಕು. ನಿಯಮದ ಪ್ರಕಾರ ರಿಸರ್ವ್ ಆಗಿರುವ ಜಾಗಗಳಲ್ಲಿ ಶೇ. ೫ ಅಂಗವಿಕಲರಿಗೆ ಮೀಸಲಿರಬೇಕಾದರೂ ಈ ನಿಯಮ ಜಾರಿಗೆ ಬರದೇ ಅನ್ಯಾಯ ನಡೆಯುತ್ತಿದೆ. ಅಂಗವಿಕಲರಿಗಾಗಿ ಸರ್ಕಾರ ಮೀಸಲಿಟ್ಟಿರುವ ಅನುದಾನವನ್ನು ಅವರ ಅಭಿವೃದ್ಧಿಗಾಗಿಯೇ ಬಳಸಬೇಕು. ಪಟ್ಟಣದ ಮಧ್ಯದಲ್ಲಿರುವ ಹಳೆಯ ಕಟ್ಟಡವನ್ನು ನವೀಕರಿಸಿ ಅಂಗವಿಕಲರ ಉಪಯೋಗಕ್ಕೆ ನೀಡಬೇಕು ಹಾಗೂ ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರುಸೌಲಭ್ಯಗಳಿಗಾಗಿ ವಿಕಲಾಂಗ ಚೇತನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡದೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್ ಎಂ ದಯಾನಂದ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದಿವ್ಯಾಂಗ ಚೇತನರ ಗೆಳೆಯರ ಬಳಗ ಮತ್ತು ಎಂ.ಆರ್. ಡಬ್ಲ್ಯು ಇವರ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಮಾಧ್ಯಮ ಶಾಲಾ ಆವರಣದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಹಾಗೂ ವಿಶ್ವ ವಿಶೇಷ ಚೇತನರ ದಿನಾಚರಣೆ ಉಪನ್ಯಾಸ, ಅಭಿನಂದನೆ, ಸಾಧನಾ ಸಲಕರಣೆ ಮತ್ತು ಬಹುಮಾನ ವಿತರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶೇಷ ಚೇತನರ ಹಕ್ಕು,ಸೌಲಭ್ಯಗಳಿಗೆ ಸ್ಪಂದಿಸುವಂತೆ ಸರ್ಕಾರ ಹಾಗು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ವಿಶೇಷ ಚೇತನರ ಹಕ್ಕು, ಸೌಲಭ್ಯ ಹಾಗೂ ಗೌರವಯುತ ಜೀವನಕ್ಕಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಇನ್ನಷ್ಟು ಸ್ಪಂದಿಸಬೇಕು. ನಿಯಮದ ಪ್ರಕಾರ ರಿಸರ್ವ್ ಆಗಿರುವ ಜಾಗಗಳಲ್ಲಿ ಶೇ. ೫ ಅಂಗವಿಕಲರಿಗೆ ಮೀಸಲಿರಬೇಕಾದರೂ ಈ ನಿಯಮ ಜಾರಿಗೆ ಬರದೇ ಅನ್ಯಾಯ ನಡೆಯುತ್ತಿದೆ. ಅಂಗವಿಕಲರಿಗಾಗಿ ಸರ್ಕಾರ ಮೀಸಲಿಟ್ಟಿರುವ ಅನುದಾನವನ್ನು ಅವರ ಅಭಿವೃದ್ಧಿಗಾಗಿಯೇ ಬಳಸಬೇಕು. ಪಟ್ಟಣದ ಮಧ್ಯದಲ್ಲಿರುವ ಹಳೆಯ ಕಟ್ಟಡವನ್ನು ನವೀಕರಿಸಿ ಅಂಗವಿಕಲರ ಉಪಯೋಗಕ್ಕೆ ನೀಡಬೇಕು ಹಾಗೂ ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಈ ದಿನದ ಕಾರ್ಯಕ್ರಮದ ಮೂಲಕ ಕುವೆಂಪು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ ವಿಶೇಷ ಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಪುರಸಭೆಯ ವತಿಯಿಂದ ಸಾಧ್ಯವಾದ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಬಿ ಶಿವರಾಜ್ ಮಾತನಾಡಿ, ವಿಶೇಷ ಚೇತನರನ್ನು ಒಂಟಿತನಕ್ಕೆ ಒಳಪಡಿಸಬಾರದು. ಅವರಿಗೆ ಅನುಕಂಪಕ್ಕಿಂತಲೂ ಮನೋಸ್ಥೈರ್ಯ ತುಂಬುವ ಕೆಲಸ ಮುಖ್ಯವಾಗಿದೆ. ಸರ್ಕಾರದಿಂದ ಅನುದಾನ ಸಿಗದವರಿಗೆ ಅಧಿಕಾರಿಗಳು ಸಹಾಯಕ್ಕೆ ನಿಲ್ಲಬೇಕು. ವಿಶೇಷ ಚೇತನರ ಕುಟುಂಬದವರು ತಮ್ಮ ಸಮಸ್ಯೆಗಳ ನಡುವೆಯೂ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆಯಿಂದಲೂ ಸಂಪೂರ್ಣ ಸಹಕಾರ ನೀಡಬೇಕು ಹಾಗೆ ಗ್ರಾಪಂ ವ್ಯಾಪ್ತಿಯಲ್ಲಿರುವ ಇಲಾಖೆ ಅಧಿಕಾರಿಗಳು ಕೂಡ ವಿಶೇಷಚೇತನರಿಗೆ ಅನುಕೂಲ ಯೋಜನೆಗಳನ್ನು ನೀಡಬೇಕು ಎಂದು ಹೇಳಿದರು.ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಅನುಪಮ ಮಾತನಾಡಿ, ಸರ್ಕಾರದ ಸಹಾಯಕ್ಕಾಗಿ ಮಾತ್ರ ನಿರೀಕ್ಷಿಸದೇ ಸಂಘಟನೆಗಳು ತಮ್ಮ ಸ್ವಂತ ಹಣದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಕೇಳಿ, ಸರ್ಕಾರದ ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸಬೇಕು. ಕನಿಷ್ಠ ೪೦ ಶೇಕಡ ಅಂಗವಿಕಲತೆ ಇದ್ದವರಿಗೆ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ. ಹೊಸ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಲು ಇಲಾಖೆ ಪ್ರಯತ್ನಿಸುತ್ತಿದ್ದು, ಪಂಚಾಯಿತಿ ಮಟ್ಟದಲ್ಲಿ ಸ್ಪಂದನೆ ಸಿಗದಿದ್ದರೆ ನೇರವಾಗಿ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ತಾಲೂಕು ದಿವ್ಯಾಂಗ ಚೇತನರ ಗೆಳೆಯರ ಬಳಗದ ಅಧ್ಯಕ್ಷ ಬಿ ಸಿ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಎಸ್ ಗಿರೀಶ್, ತಾಹೀರಾ, ಖಂಡೋಜಿರಾವ್, ಕಸಾಪ ಗೌರವ ಕಾರ್ಯದರ್ಶಿ ಶಿವಮೂರ್ತಿ, ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ತಿಮ್ಮೇಶ್, ಸಾಹಿತಿ ಮಧುಮಾಲತಿ, ಹೆಚ್ ಎಂ ರವೀಂದ್ರ, ರಾಜಶೇಖರಪ್ಪ, ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಇತರರು ಹಾಜರಿದ್ದರು.