ಬ್ಯಾಗಡೇಹಳ್ಳಿ ಬಳಿ ಬೋನಿಗೆ ಬಿದ್ದ ಚಿರತೆ ಸೆರೆ

| Published : May 19 2024, 01:46 AM IST

ಸಾರಾಂಶ

ಬ್ಯಾಗಡೇ ಹಳ್ಳಿ ಸಮೀಪದಲ್ಲಿ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿರುವ ಪರಿಣಾಮ ಗ್ರಾಮಸ್ಥರು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೀರೂರು

ಸಮೀಪದ ಬ್ಯಾಗಡೇ ಹಳ್ಳಿ ಸಮೀಪದಲ್ಲಿ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿರುವ ಪರಿಣಾಮ ಗ್ರಾಮಸ್ಥರು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

ಚಿರತೆ ಗ್ರಾಮದ ಜಮೀನುಗಳಲ್ಲಿ ಹಾಗೂ ಊರ ಒಳಭಾಗದಲ್ಲಿ ಸಂಚರಿಸುತ್ತಿದ್ದು ಅದನ್ನು ಕಂಡ ಜನ ಭಯಭೀತರಾಗಿದ್ದರಿಂದ ವಿಜಯಕುಮಾರ್ ಎನ್ನುವವರು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಚಿರತೆ ಸೆರೆ ಹಿಡಿಯಲು ತೋಟದಲ್ಲಿ ಬೋನು ಇಡುವಂತೆ ಮನವಿ ಮಾಡಿದ್ದರ ಪರಿಣಾಮ ಇಲಾಖೆಯಿಂದ ಬೋನು ಇಡಲಾಗಿತು. ಶುಕ್ರವಾರ ರಾತ್ರಿ 8-9ರ ಸಮಯದಲ್ಲಿ ಬೋನಿನಲ್ಲಿ ಇದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದದೆ. ಬೆಳಗಿನ ಜಾವ ತೋಟಕ್ಕೆ ಬಂದ ಅಕ್ಕ-ಪಕ್ಕದ ಜಮೀನಿನವರು ಚಿರತೆ ಶಬ್ಧ ಕೇಳಿ ನೋಡಿದಾಗ ಬೋನಿಗೆ ಬಿದ್ದಿರುವುದು ಗೊತ್ತಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಬೋನಿಗೆ ಬಿದ್ದಿದ್ದ ಚಿರತೆಯನ್ನು ವಾಹನದ ಮೂಲಕ ಸಾಗಿಸಿದ್ದಾರೆ. ಬೋನಿಗೆ ಬಿದ್ದಿದ್ದ ಚಿರತೆ ನೋಡಲು ಸುತ್ತಮುತ್ತಲ ಜನ ಮುಗಿ ಬಿದ್ದು, ಪೋಟೋ ಕ್ಲಿಕ್ಕಿಸುತ್ತಿದ್ದುದು ಕಂಡು ಬಂತು.

ಈ ಹಿಂದೆ ಚಿರತೆ ಹಾವಳಿ ಜಾಸ್ತಿಯಾಗಿದ್ದು ರೈತಾಪಿ ಜನರು ತಮ್ಮ ಹೊಲ ಜಮೀನುಗಳಿಗೆ ತೆರಳಲು ಕಷ್ಟಸಾಧ್ಯವಾಗಿತ್ತು. ಜೊತೆಗೆ ಗ್ರಾಮಸ್ಥರು ಸಾಕಿದ್ದ ದನ, ಕುರಿ, ಮೇಕೆ ಮುಂತಾದವುಗಳನ್ನು ತಿಂದಿರುವುದು ಭಯ ಹುಟ್ಟಿಸಿತ್ತು. ಬೀರೂರು ಕಾವಲು ಸಮೀಪದಲ್ಲೇ ಇರುವುದ್ದರಿಂದ ಈ ಹಿಂದೆಯು ಸಹ ಕಾವಲು ಚೌಡೇಶ್ವರಿ ದೇಗುಲದ ಸಮೀಪ 2 ತಿಂಗಳ ಹಿಂದೆ 2 ಚಿರತೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಇನ್ನು ಒಂದೆರಡು ಚಿರತೆಗಳು ಇಲ್ಲಿರುವ ಮಾಹಿತಿ ಇದ್ದು ಅರಣ್ಯ ಇಲಾಖೆ ಕೊಂಚ ಯೋಚಿಸಿ ಕಾರ್ಯಚರಣೆ ನಡೆಸಿದರೆ ಅವುಗಳನ್ನು ಕೂಡ ಹಿಡಿಯಬಹುದು ಎನ್ನುತ್ತಾರೆ ಗ್ರಾಮದ ಲಕ್ಷ್ಮಮ್ಮ.

ಬ್ಯಾಗಡೇಹಳ್ಳಿ ಗ್ರಾಮಸ್ಥರಿಂದ ಒಂದು ವಾರದ ಹಿಂದೆ ಚಿರತೆ ಹಾವಳಿ ಬಗ್ಗೆ ದೂರು ನೀಡಲಾಗಿತ್ತು, ಅದರಂತೆ ಯೋಚಿಸಿ ಚಿರತೆ ಸಂಚರಿಸುವ ಜಾಗವನ್ನು ಪರಿಶೀಲಿಸಿ ಬೋನನ್ನು ಇಡಲಾಗಿತ್ತು, ಶುಕ್ರವಾರ 5 ವರ್ಷದ ಚಿರತೆಯು ಬೋನಿಗೆ ಬಿದ್ದಿದ್ದು, ಮೇಲಾಧಿಕಾರಿಗಳ ಸೂಚನೆಯಂತೆ ಚಿರತೆಯನ್ನು ಭದ್ರಾ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಆರ್.ಡಿ.ನದಾಫ್. ತಾಲೂಕು ವಲಯ ಅರಣ್ಯಾಧಿಕಾರಿ ಕಡೂರು.