ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ನದಿ ನೀರನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಲು ಮಹಾರಾಷ್ಟ್ರ ಹುನ್ನಾರ ನಡೆಸಿದೆ. ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಕೃಷ್ಣಾ ನದಿಯಿಂದ 40 ಟಿಎಂಸಿ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ಹರಿಸೋಕೆ ಪ್ಲ್ಯಾನ್ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರವು 2026ರ ಅಂತ್ಯದ ವೇಳೆಗೆ ಸುಮಾರು ₹19,000 ಕೋಟಿ ಯೋಜನೆಯ ಡಿಪಿಆರ್ ಸಿದ್ಧಪಡಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಗಂಭೀರ ಆರೋಪ ಮಾಡಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 2ರ ಆದೇಶದ ಗೆಜೆಟ್ ನೋಟಿಪೀಕೇಷನ್‌ಗೂ ಮುನ್ನವೇ ಮಹಾರಾಷ್ಟ್ರ ಹೊಸ ಯೋಜನೆ ರೂಪಿಸಿದ್ದು, ಇದು ಕಾನೂನು ಬಾಹಿರವಾಗಿದೆ. ಅಕ್ಟೋಬರ್ 9 ರಂದು ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್-2026 ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮಾತನಾಡಿರುವ ವಿಡಿಯೋ ಪ್ರದರ್ಶನ ಮಾಡಿದರು. ಈ ಯೋಜನೆಗೆ ವರ್ಲ್ಡ್ ಬ್ಯಾಂಕ್‌ನಿಂದ ಹಣಕಾಸು ನೆರವು ಪಡೆಯಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.ಆದರೆ, ವರ್ಲ್ಡ್ ಬ್ಯಾಂಕ್‌ನಿಂದ ಹಣಕಾಸು ನೆರವು ಪಡೆಯಲು ಕೇಂದ್ರ ಸರ್ಕಾರದಿಂದ ಪರವಾನಗಿ ಅವಶ್ಯಕ. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 2ರ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಆಗದೇ ವರ್ಲ್ಡ್‌ಬ್ಯಾಂಕ್‌ನಿಂದ ಹಣಕಾಸು ನೆರವು ಹೇಗೆ ಪಡೆದರು?. ಈ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ನಮಗೆ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಗಳಿಗೆ ವರ್ಲ್ಡ್ ಬ್ಯಾಂಕ್ ಹಣಕಾಸು ನೆರವು ಪಡೆಯಲು ಆಗಿಲ್ಲ. ಯುಕೆಪಿ ಯೋಜನೆಯ ಡಿಪಿಆರ್‌ಗಳನ್ನು ಮಾಡಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ ಎಂದು ವಾಪಸ್ ಮಾಡಿದ್ದಾರೆ. ಹಾಗಾದರೆ, ಗೆಜೆಟ್ ನೋಟಿಫಿಕೆಷನ್ ಆಗದೇ ಮಹಾರಾಷ್ಟ್ರದವರ ಯೋಜನೆಗೆ ವರ್ಲ್ಡ್‌ಬ್ಯಾಂಕ್ ಹಣಕಾಸು ಸಹಾಯ ಮಾಡಿದ್ದು ಹೇಗೆ ಎಂಬುದು ತಿಳಿಯದಂತಾಗಿದೆ ಎಂದರು.
ಮಹಾಬಲೇಶ್ವರಿಂದ ಭೀಮಾನದಿಯ ಉಜನಿ ಜಲಾಶಯಕ್ಕೆ 40 ಟಿಎಂಸಿ ನೀರು ಹರಿಸುವ ಯೋಜನೆಯಿಂದ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಮಾರಕವಾಗುತ್ತದೆ. ಇದರ ಮಧ್ಯೆಯೂ ವರ್ಲ್ಡ್‌ಬ್ಯಾಂಕ್ ಹಣಕಾಸು ನೆರವು ಪಡೆದ ಮಹಾರಾಷ್ಟ್ರದವರು ಯೋಜನೆಗೆ ಡಿಪಿಆರ್ ಮಾಡುತ್ತಿದ್ದಾರೆ. ಡಿಪಿಆರ್ ಸಿದ್ಧಪಡಿಸಲು ಜುಲೈನಲ್ಲಿ ₹24 ಕೋಟಿ ಮಂಜೂರು ಮಾಡಿದ್ದು, 2026ರ ಅಂತ್ಯದ ವೇಳೆಗೆ ₹ 19 ಸಾವಿರ ಕೋಟಿಯ ಡಿಪಿಆರ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 2ರ ಪ್ರಕಾರ 2050ರವರೆಗೆ ಕೃಷ್ಣಾನದಿ ನೀರಿನ ವಿಚಾರದಲ್ಲಿ ಹೊಸ ಯೋಜನೆ ಮಾಡುವ ಹಾಗಿಲ್ಲ. ಲಭ್ಯವಿರುವ 2,130 ಟಿಎಂಸಿ ಅಡಿ ನೀರಿಗಿಂತ ಹೆಚ್ಚುವರಿಯಾಗಿ, 448 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಮಹಾರಾಷ್ಟ್ರಕ್ಕೆ 81 ಟಿಎಂಸಿ , ಕರ್ನಾಟಕಕ್ಕೆ 173 ಟಿಎಂಸಿ ಹಾಗೂ ಅವಿಭಜಿತ ಆಂಧ್ರಪ್ರದೇಶ, ತೆಲಂಗಾಣಕ್ಕೆ ಸೇರಿ 194 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ಆನಂದಪ್ರಕಾಶ ಮೀನಾ, ಜಿಲ್ಲಾ ಪೊಲೀಶ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಜುಫೀಶಾನ ಹಕ್ ಇದ್ದರು.
--------
ಕೋಟ್
ಈಗ ಮಹಾರಾಷ್ಟ್ರ ಸರ್ಕಾರ ಉಜನಿ ಜಲಾಶಯಕ್ಕೆ ಕೃಷ್ಣಾನದಿಯ 40 ಟಿಎಂಸಿ ನೀರು ಹರಿಸಿದರೆ ಸಮಸ್ಯೆಯಾಗಲಿದ್ದು, ಈ ವಿಚಾರದ ಕುರಿತು ನಮ್ಮ ಸರ್ಕಾರ ಕಾನೂನು ಪ್ರಕಾರ ಹೋರಾಟ ಮಾಡುತ್ತದೆ. ಸಿಎಂ ಡಿ.ಕೆ.ಶಿವಕುಮಾರ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಗಮನಕ್ಕೆ ತರಲಾಗುತ್ತದೆ. ಕೃಷ್ಣಾನದಿ ವ್ಯಾಪ್ತಿಗೆ ಬರುವ ಶಾಸಕರು, ಸಚಿವರು, ಸಂಸದರ ಬಳಿ ಚರ್ಚೆ ಮಾಡುತ್ತೇವೆ. ಪಕ್ಷಾತೀತವಾಗಿ ಈ ವಿಚಾರವನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಈ ವಿಚಾರದ ಕುರಿತು ಜಲತಜ್ಞರು, ಕಾನೂನು ತಜ್ಞರೊಂದಿಗೆ ಮಾತನಾಡಿ ಮಾಹಿತಿ ಪಡೆಯಲಾಗುವುದು.- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು