ಕನ್ನಡಪ್ರಭ ವಾರ್ತೆ ಇಳಕಲ್ಲ

ಮಳೆ ಕೈಕೊಟ್ಟು ಮುಂಗಾರು ಬೆಳೆ ಸಂಪೂರ್ಣ ನಾಶವಾದರೂ ಫಸಲ್‌ ಬಿಮಾ ಯೋಜನೆಯ ಬೆಳೆವಿಮೆ ಹಣ ರೈತರಿಗೆ ಜಮೆ ಆಗಿಲ್ಲ. ವಿಮಾ ಕಂಪನಿ ಹಾಗೂ ಸರ್ಕಾರ ರೈತರ ಪರ ಇದೆ ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ಇಲ್ಲಿಯವರೆಗೂ ವಿಮಾ ಕಂಪನಿಯಿಂದ ಬೆಳೆ ಪರಿಹಾರ ಕೊಡಿಸುವ ಬಗ್ಗೆ ಒಂದು ಮಾತೂ ಆಡುತ್ತಿಲ್ಲ. ವಿಮಾ ಕಂಪನಿ ಹಾಗೂ ಸರ್ಕಾರ ಸೇರಿ ರೈತರಿಗೆ ಅನ್ಯಾಯ ಎಸಗುತ್ತಿವೆ ಎಂದು ರೈತ ಮುಖಂಡ ಬಸವರಾಜ ಪಾಟೀಲ ಆರೋಪಿಸಿದರು.

ಅತಿವೃಷ್ಟಿ, ಅನಾವೃಷ್ಟಿ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಬೆಳಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿವ ರೈತರ ನೆರವು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆ ಜಾರಿಗೊಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.98ರಷ್ಟು ಪ್ರಿಮಿಯಂ ಹಣ ಭರಿಸಿದರೆ, ರೈತರು ಶೇ.2ರಷ್ಟು ಪ್ರಿಮಿಯಂ ಹಣ ಭರಿಸುತ್ತಾರೆ. ಎಕರೆಗೆ ₹2000ಕ್ಕೂ ಅಧಿಕ ಪ್ರಿಮಿಯಂ ಭರಿಸಲಾಗುತ್ತದೆ. ಇದರಿಂದ ವಿಮಾ ಕಂಪನಿಗಳಿಗೆ ನೂರಾರು ಕೋಟಿಯ ಹಣ ಸಂದಾಯವಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಹಾನಿಯಾದ ಸಂದರ್ಭದಲ್ಲಿ ಕೆಲವು ಬಾರಿ ಎಕರೆಗೆ ಸಾವಿರ, ಎರಡು ಸಾವಿರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತವೆ .ಫಸಲ್‌ಬಿಮಾ ಯೋಜನೆ ಜಾರಿಯಾಗಿ ಎರಡು ದಶಕಗಳು ಕಳೆದರೂ ಈವರೆಗೆ ರೈತರಿಗೆ ಬೆಳೆಹಾನಿಯ ಸಂಪೂರ್ಣ ಹಣವನ್ನು ವಿಮಾ ಕಂಪನಿಗಳು ಪಾವತಿಸಿದ ಉದಾಹರಣೆಗಳಿಲ್ಲ. ಇದರಿಂದ ವಿಮಾ ಕಂಪನಿಗಳು ಪ್ರತಿವರ್ಷ ನೂರಾರು ಕೋಟಿ ಲಾಭ ಗಳಿಸುತ್ತಿವೆ ಎಂಬುದು ರೈತರ ಆರೋಪ.

ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಸ್ವೀಕರಿಸಿ ಇಳಕಲ್ ತಾಲೂಕು ಸೇರಿದಂತೆ ರಾಜ್ಯದ ಬರಪೀಡಿತ ಎಲ್ಲಾ ತಾಲೂಕುಗಳ ರೈತರಿಗೆ ನ್ಯಾಯಬದ್ಧವಾಗಿ ಬರಬೇಕಾಗಿರುವ ಬೆಳೆವಿಮೆ ಹಣವನ್ನು ಸಂದಾಯ ಮಾಡಲು ವಿಮಾ ಕಂಪನಿ ಮೇಲೆ ಒತ್ತಡ ತರಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.