ಕನ್ನಡಪ್ರಭ ವಾರ್ತೆ ಸಿಂದಗಿ ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ, ಭಾಷೆ ಮತ್ತು ಬದುಕಿನ ಸೊಬಗನ್ನು ತನ್ನೊಡಲಲ್ಲಿ ಹೊತ್ತಿರುವ ಹೆಮ್ಮೆಯ ಕನ್ನಡ ನಾಡು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ, ಭಾಷೆ ಮತ್ತು ಬದುಕಿನ ಸೊಬಗನ್ನು ತನ್ನೊಡಲಲ್ಲಿ ಹೊತ್ತಿರುವ ಹೆಮ್ಮೆಯ ಕನ್ನಡ ನಾಡು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡವು ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕ. ಏಕೀಕರಣದ ಹೋರಾಟ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆ ನಮ್ಮ ನಾಡಿನ ಹೆಮ್ಮೆ. ಜಾಗತೀಕರಣದ ಯುಗದಲ್ಲಿ ಇತರ ಭಾಷೆಗಳನ್ನು ಕಲಿಯುತ್ತಲೇ ಮಾತೃಭಾಷೆಯ ಬೇರುಗಳನ್ನು ಉಳಿಸಿಕೊಳ್ಳಬೇಕು. ಕನ್ನಡದ ಪ್ರೀತಿ ಕೇವಲ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗದೆ, ನಮ್ಮ ದೈನಂದಿನ ಮಾತು, ಶಿಕ್ಷಣ, ತಂತ್ರಜ್ಞಾನ ಹಾಗೂ ಮುಂದಿನ ಪೀಳಿಗೆಯ ಬದುಕಿನಲ್ಲಿ ಸದಾ ಜೀವಂತವಾಗಿರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಕನ್ನಡಾಂಬೆಯ ಭಾವಚಿತ್ರವನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು.ಈ ವೇಳೆ ಕಸಾಪ ಅಧ್ಯಕ್ಷ ವೈ.ಸಿ.ಮಯೂರ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ರಮೇಶ್ ಹೂಗಾರ್, ತಾಲೂಕು ನೌಕರ ಸಂಘದ ಅಧ್ಯಕ್ಷ ಅಶೋಕ್ ತೆಲ್ಲೂರ್, ರಾಜಶೇಖರ್ ಕೂಚಬಾಳ, ಶಾಂತಪ್ಪ ರಾಣಗೋಳ, ನಗರಸಭೆಯ ರವಿ ಶಿರಗುಪ್ಪಿ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು, ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.