ಕನ್ನಡಪ್ರಭ ವಾರ್ತೆ ಯಾದಗಿರಿ
ಹಸಿರು ಸಂಪತ್ತಿನ ಸಂರಕ್ಷಣೆ, ಭೂತಾಯಿಗೆ ಕೃತಜ್ಞತೆ ಮತ್ತು ಕೃಷಿ ಸಂಸ್ಕೃತಿಯ ಮಹತ್ವ ಸಾರುವ ಶೀಗಿ ಹುಣ್ಣಿಮೆ ಪ್ರಕೃತಿಯೊಂದಿಗೆ ಮಾನವನ ಅವಿನಾಭಾವ ಸಂಬಂಧ ನೆನಪಿಸುವ ಹಬ್ಬವಾಗಿದೆ ಎಂದು ಸದ್ಗುರು ಶ್ರೀ ದಾಸಬಾಳದೀಶ್ವರ ಮಠದ ಪೀಠಾಧಿಪತಿ ವೀರೇಶ್ವರ ಶ್ರೀ ಹೇಳಿದರು.ನಗರದ ಸದ್ಗುರು ಶ್ರೀ ದಾಸಬಾಳದೀಶ್ವರ ಮಠದಲ್ಲಿ ಸೋಮವಾರ ಶೀಗಿ ಹುಣ್ಣಿಮೆ ಅಂಗವಾಗಿ ನಡೆದ ಶ್ರೀದೇವಿ ಪಾರಾಯಣ ಮಹಾಮಂಗಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನ್ನ ನೀಡುವ ಭೂತಾಯಿ ಆರಾಧಿಸಿ ಕೃತಜ್ಞತೆ ಸಲ್ಲಿಸುವುದು ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದಿರುವ ಶ್ರೇಷ್ಠ ಸಂಪ್ರದಾಯ ಎಂದರು.
ಮುಂಗಾರು ಬೆಳೆ ಕೈಗೆ ಬರುವ ಸಂದರ್ಭ ರೈತರು ಜೋಳ, ಸಜ್ಜೆ, ರಾಗಿ, ಹೆಸರು ಸಹಿತ ವಿವಿಧ ಧಾನ್ಯಗಳ ರಾಶಿ ಮಾಡಿ ಸಂಭ್ರಮಿಸುತ್ತಾರೆ. ಕುಟುಂಬದ ಸದಸ್ಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಅಲಂಕೃತ ಎತ್ತುಗಳೊಂದಿಗೆ ಚಕ್ಕಡಿಯಲ್ಲಿ ಹೊಲಕ್ಕೆ ತೆರಳಿ ಭೂದೇವಿಗೆ ಪೂಜೆ ಸಲ್ಲಿಸುತ್ತಾರೆ. ವಿವಿಧ ಖಾದ್ಯಗಳನ್ನು ನೈವೇದ್ಯ ಮಾಡಿ ಹೊಲದ ನಾಲ್ಕು ದಿಕ್ಕುಗಳಲ್ಲಿ ಚೆಲ್ಲುವ ಸಂಪ್ರದಾಯವನ್ನು ''''''''ಚರಗ ಚೆಲ್ಲುವುದು'''''''' ಎಂದು ಕರೆಯಲಾಗುತ್ತದೆ. ಬಳಿಕ ಕುಟುಂಬದವರು ಒಟ್ಟಾಗಿ ಹಬ್ಬದೂಟ ಸವಿಯುತ್ತಾರೆ ಎಂದು ವಿವರಿಸಿದರು.*ಪ್ರಕೃತಿ ರಕ್ಷಣೆ ಜವಾಬ್ದಾರಿ: ಮಾನವನ ಸ್ವಾರ್ಥ ಮತ್ತು ಪ್ರಕೃತಿಯ ಮೇಲಿನ ಅತೀ ಹಸ್ತಕ್ಷೇಪದಿಂದ ಪರಿಸರದ ಸಮತೋಲನ ಹದಗೆಡುತ್ತಿದೆ. ಜಾಗತಿಕ ತಾಪಮಾನ ಏರಿಕೆ, ನೀರಿನ ಕೊರತೆ ಹಾಗೂ ಹಸಿರು ಸಂಪತ್ತಿನ ನಾಶದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ ಗೌರವಿಸುವುದರ ಜತೆಗೆ ಅರಣ್ಯ, ಜಲಮೂಲ ಮತ್ತು ಪರಿಸರ ಸಂರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು ಎಂದು ವೀರೇಶ್ವರ ಶ್ರೀ ಕರೆ ನೀಡಿದರು.
ವಿಜ್ಞಾನ ಎಷ್ಟೇ ಮುಂದುವರಿದರೂ ಭೂಮಿ, ನೀರು ಮತ್ತು ಶುದ್ಧ ಗಾಳಿಯಿಲ್ಲದೆ ಕೃಷಿ ಹಾಗೂ ಜೀವಜಗತ್ತಿನ ಉಳಿವು ಸಾಧ್ಯವಿಲ್ಲ. ಹೀಗಾಗಿ ಹಬ್ಬಗಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಿಸರ ಮಹತ್ವವನ್ನು ಯುವಪೀಳಿಗೆಗೆ ತಿಳಿಸಬೇಕು ಎಂದರು.
ಚರಬಸವೇಶ್ವರ ಸಂಸ್ಥಾನದ ಒಡೆಯರಾದ ಬಸಯ್ಯಪ್ಪ ಶರಣರು ಧರ್ಮಪತ್ನಿ ಶಕುಂತಲಾ ದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಜ್ಯೋತಿಲತಾ ತಡಿಬಿಡಿಮಠ ಉಪನ್ಯಾಸ ನೀಡಿದರು. ಬಿಜೆಪಿಯ ಹಿರಿಯ ಮುಖಂಡರಾದ ರಾಚನ ಗೌಡ ಮುದ್ನಾಳ ಬಸಂತರಾಯ ಗೌಡ ಮಾಲಿಪಾಟೀಲ್, ಡಾ. ಅಮೋಘ ವಿ ಬಿ ಆರ್ ಹಾಸ್ಪಿಟಲ್, ಶರಣಗೌಡ ಮಲಾರ, ಮಂಜುಳಾ ಗೂಳಿ, ಸೊಮನಗೌಡ ಬೆಳಿಗೇರಿ, ಅಭಿಯಂತರ ಹೇಮಂತ್ ಕುಮಾರ್, ಬಸನಗೌಡ ಅಲ್ಲಿಪೂರ, ಅರೊಣದಯ ಗುರುಜಿ, ಲಕ್ಷ್ಮಿಪುತ್ರ, ಮಲ್ಲಿಕಾರ್ಜುನ ವಕಾರಣಿ ಪಾಟಿಲ್ ಉಪಸ್ಥಿತರಿದ್ದರು. ಮಲ್ಲಣ್ಣ ಹೊಸಮನಿ ಶಿರವಾಳ ಪ್ರಸ್ತಾವನೆಗೈದರು. ಶಿವರಾಜ ಜಕಾತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಜರುಗಿದವು.