ಕಲಾವಿದನ ಕೈಯಲ್ಲಿ ಅರಳಿದ ಸಮಗ್ರ ಕೃಷಿ ಮೇಳದ ಚಿತ್ರ

| Published : Sep 12 2025, 01:00 AM IST

ಕಲಾವಿದನ ಕೈಯಲ್ಲಿ ಅರಳಿದ ಸಮಗ್ರ ಕೃಷಿ ಮೇಳದ ಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ದಿನಗಳ ವರೆಗೆ ನಡೆಯಲಿರುವ ಇಡೀ ಕೃಷಿ ಮೇಳವನ್ನು ಸ್ಥಳೀಯ ಕಲಾವಿದ, ಶಿಕ್ಷಕರು ಆದ ಮಹಾಂತೇಶ ಹುಬ್ಬಳ್ಳಿ ಅದ್ಭುತವಾಗಿ, ಸಮಗ್ರವಾಗಿ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಅವರ ಚಿತ್ರದಲ್ಲಿ ಕೃಷಿ ವಿವಿ ಮುಖ್ಯ ಕಟ್ಟಡ, ಕಟ್ಟಡಕ್ಕೆ ಹೊಂದಿಕೊಂಡ ಉದ್ಯಾನವನ ಕಣ್ಮನ ಸೆಳೆಯುತ್ತದೆ.

ಧಾರವಾಡ: ಸೆ. 13ರಿಂದ ನಾಲ್ಕು ದಿನಗಳ ವರೆಗೆ ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ರೈತರ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಕೃಷಿ ಮೇಳಕ್ಕೆ ವಿಶ್ವವಿದ್ಯಾಲಯವು ಸಂಪೂರ್ಣ ಸಜ್ಜಾಗಿದೆ.

ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಈ ಕೃಷಿ ಮೇಳಕ್ಕೆ ರೈತರು ಹಾಗೂ ಕೃಷಿ ಆಸಕ್ತರು ಆಗಮಿಸುತ್ತಿದ್ದು, ಈ ಬಾರಿ 20 ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಭೇಟಿ ನೀಡಬಹುದು ಎಂದು ವಿಶ್ವವಿದ್ಯಾಲಯ ಅಂದಾಜಿಸಿದೆ.

ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಂಪ್ರದಾಯಿಕ ತಳಿಗಳು ಹೆಸರಿನಲ್ಲಿ ಈ ಬಾರಿ ಮೇಳ ಆಯೋಜಿಸಿದ್ದು, ಈಗಾಗಲೇ ಆವರಣದಲ್ಲಿ 500ಕ್ಕೂ ಹೆಚ್ಚು ಮಳಿಗೆ ಹಾಕಲಿದ್ದು ಆವರಣ ರೈತರನ್ನು ಆಕರ್ಷಿಸಲು ಸಂಪೂರ್ಣ ಸಜ್ಜಾಗಿದೆ.

ಸಾಮಾನ್ಯವಾಗಿ ತಾಂತ್ರಿಕತೆಗಳು, ಕೃಷಿ ಕೇಂದ್ರಿತ ವಸ್ತುಗಳ ಪ್ರದರ್ಶನ, ಯಂತ್ರೋಪಕರಣಗಳು, ರೈತರ ಆವಿಷ್ಕಾರ, ರೈತರೊಂದಿಗೆ ಚರ್ಚೆ, ಪ್ರಶಸ್ತಿ ವಿತರಣೆಯ ಜತೆಗೆ ಪ್ರತಿ ವರ್ಷದಂತೆ ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಜಾನುವಾರು ಪ್ರದರ್ಶನ ರೈತರು ಹಾಗೂ ಸಾರ್ವಜನಿಕರನ್ನು ಆಕರ್ಷಿಸಲಿವೆ. ಹಿಂಗಾರು ರೈತರಿಗೆ ಅನುಕೂಲವಾಗಲು ಬೀಜ ಮೇಳವು ರೈತರನ್ನು ಕೈ ಬೀಸಿ ಕರೆಯುತ್ತಿದೆ.

ಸೆ. 13ರಿಂದಲೇ ಮೇಳವು ಪ್ರಾರಂಭವಾದರೂ ಸೆ.14ರಂದು ರಾಜ್ಯಪಾಲರು ಬೀಜ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಸೆ. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ನಾಲ್ಕು ದಿನಗಳ ವರೆಗೆ ನಡೆಯಲಿರುವ ಇಡೀ ಕೃಷಿ ಮೇಳವನ್ನು ಸ್ಥಳೀಯ ಕಲಾವಿದ, ಶಿಕ್ಷಕರು ಆದ ಮಹಾಂತೇಶ ಹುಬ್ಬಳ್ಳಿ ಅದ್ಭುತವಾಗಿ, ಸಮಗ್ರವಾಗಿ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಅವರ ಚಿತ್ರದಲ್ಲಿ ಕೃಷಿ ವಿವಿ ಮುಖ್ಯ ಕಟ್ಟಡ, ಕಟ್ಟಡಕ್ಕೆ ಹೊಂದಿಕೊಂಡ ಉದ್ಯಾನವನ ಕಣ್ಮನ ಸೆಳೆಯುತ್ತದೆ. ಉದ್ಯಾನವನದ ಪ್ರವೇಶದ್ವಾರಕ್ಕೆ ತೋರಣವಾಗಿ ಎಡಕ್ಕೆ ಗೊನೆ ಹೊಂದಿರುವ ಬಾಳೆಗಿಡವಿದ್ದು ಬಲಕ್ಕೆ ಫಲಭರಿತ ತಾಳೆಮರವನ್ನು ಚಿತ್ರಿಸಲಾಗಿದೆ. ತಂತ್ರಜ್ಞಾನ ಆಧಾರಿತ ಕೃಷಿಗೆ ಸಂಬಂಧಪಟ್ಟಂತೆ ಕ್ರಿಮಿನಾಶಕ ಹಾಗೂ ರಸಗೊಬ್ಬರ ಸಿಂಪಡಿಸುತ್ತಿರುವ ಡ್ರೋನ್ ಸಹ ಕಾಣಬಹುದು.

ಅಧಿಕ ಫಸಲಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳನ್ನು ಅಲ್ಲಲ್ಲಿ ಯಥಾವತ್ತಾಗಿ ಚಿತ್ರೀಸಲಾಗಿದೆ. ಈ ವರ್ಷದ ಕೃಷಿ ಮೇಳದ ಘೋಷವಾಕ್ಯ ಕುರಿತಂತೆ ಬಗೆಬಗೆ ಹಣ್ಣುಗಳು ತರಹೇವಾರಿ ತರಕಾರಿಗಳ ಪ್ರದರ್ಶನ ಮತ್ತು ಹಲವು ಬಗೆಯ ಸಿರಿ ಧಾನ್ಯಗಳಿಂದ ತುಳುಕುತ್ತಿದೆ. ಹಲವಾರು ಅಲಂಕಾರಿಕ ಹೂವಿನ ಬೆಳೆಗಳು ಕೃಷಿ ಮೇಳದ ಅಂದ ಹೆಚ್ಚಿಸಿವೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಸಂದೇಶವಿರುವ ಕೃಷಿ ವಿವಿ ಲಾಂಛನವನ್ನು ಸಹ ಕಲಾವಿದ ಮರೆತಿಲ್ಲ. ರೈತರು ಬೆಳೆದ ಬೆಳೆಗಳನ್ನು ವೀಕ್ಷಿಸುತ್ತಿರುವ ಕೃಷಿ ವಿಜ್ಞಾನಿಗಳ ತಂಡ, ಪ್ರಗತಿಪರ ರೈತರನ್ನು ಸಂದರ್ಶಿಸಿ ಮಾಹಿತಿ ಪಡೆಯುತ್ತಿರುವ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕಾಣಬಹುದಾಗಿದೆ. ಪ್ರಗತಿಪರ ರೈತರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವ ದೃಶ್ಯ ಅತ್ಯಂತ ಮನಮೋಹಕವಾಗಿ ಮೂಡಿಬಂದಿದೆ. ಭರಪೂರ ಬೆಳೆಗಳ ಮಧ್ಯ ನಿಂತು, ರೈತರ ಆರಾಧ್ಯ ದೈವ ಬಸವಣ್ಣನಿಗೆ ನಮಸ್ಕರಿಸುತ್ತಿರುವ ರೈತ ದಂಪತಿಗಳು, ಅವರ ಹೆಗಲ ಮೇಲಿರುವ ಮೇಕೆ, ಕೋಳಿ ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದ್ದು, ಕಲಾವಿದನ ಈ ಚಿತ್ರಕ್ಕೆ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ ಅಭಿನಂದಿಸಿದ್ದಾರೆ.