ಅರಣ್ಯ ರಕ್ಷಣೆ ನಾಗರಿಕರಿಗೂ ಸೇರಿದ್ದು

| Published : Sep 12 2025, 01:00 AM IST

ಸಾರಾಂಶ

ಹುತಾತ್ಮರ ದಿನ ಸ್ಮರಣೀಯವಾದ್ದು, ಅವರ ತ್ಯಾಗ, ಬಲಿದಾನ ನಾವು ಗೌರವಿಸಬೇಕು. ಅವರ ಕುಟುಂಬ ಸದಸ್ಯರೊಂದಿಗೆ ನಾವು ಇರಬೇಕು.

ಧಾರವಾಡ: ದೇಶದ ಅಭಿವೃದ್ಧಿಗೆ ಅಗತ್ಯವಿರುವ ನೈಸರ್ಗಿಕ ಸಂಪನ್ಮೂಲ ಮತ್ತು ದೇಶದ ನಾಗರಿಕರಿಗೆ ಉತ್ತಮ ಆರೋಗ್ಯ, ಜೀವನ ಲಭಿಸಲು ಅರಣ್ಯ ಸಂಪತ್ತು ಅಗತ್ಯವಾಗಿದೆ. ವನ್ಯಜೀವಿಗಳಿಗೂ ಅರಣ್ಯ ಅಸರೆಯಾಗಿದೆ. ಆದ್ದರಿಂದ ಅರಣ್ಯದ ರಕ್ಷಣೆ, ಬರೀ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ, ದೇಶದ ಎಲ್ಲ ನಾಗರಿಕರದ್ದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಿ.ಎಸ್. ಭಾರತಿ ಹೇಳಿದರು.

ಅರಣ್ಯ ಇಲಾಖೆ ಧಾರವಾಡ ವೃತ್ತದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವನ್ಯಜೀವಿಗಳ ಸಂರಕ್ಷಣೆ, ಅರಣ್ಯ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕು. ಉತ್ತಮ ಗಾಳಿ, ನೀರು, ಫಲವತ್ತಾದ ಮಣ್ಣು ಸಿಗಲು ನಾವು ಗಿಡಮರ, ಪ್ರಾಣಿ, ಪಕ್ಷಿಗಳನ್ನು ಕಾಪಾಡಬೇಕು ಎಂದರು.

ಹುತಾತ್ಮರ ದಿನ ಸ್ಮರಣೀಯವಾದ್ದು, ಅವರ ತ್ಯಾಗ, ಬಲಿದಾನ ನಾವು ಗೌರವಿಸಬೇಕು. ಅವರ ಕುಟುಂಬ ಸದಸ್ಯರೊಂದಿಗೆ ನಾವು ಇರಬೇಕು. ಕಳೆದ 60 ವರ್ಷಗಳಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯನಿರತ ವಿವಿಧ ಹಂತದ ಸುಮಾರು 62 ಜನ ಅಧಿಕಾರಿ, ಸಿಬ್ಬಂದಿಗಳು ಹುತಾತ್ಮರಾಗಿದ್ದು, ಅವರ ಕಾರ್ಯವನ್ನು ನ್ಯಾಯಾಧೀಶರು ಶ್ಲಾಘಿಸಿದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಕಿರಣಕುಮಾರ ಕರತಂಗಿ ಹುತಾತ್ಮರ ವಿವರ ವಾಚಿಸಿ ಸೇವೆ ಸ್ಮರಿಸಿದರು.

ಶಿಕ್ಷಕಿ ಮೀನಾಕ್ಷಿ ಹಿರೇಮಠ ನಿರೂಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ. ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎಸ್. ವರೂರ, ಅಶೋಕ ಗೊಂಡೆ, ಡಾ. ಶಿವಕುಮಾರ, ಸುರೇಶ ತೇಲಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಎಂ. ಹಿರೇಮಠ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಚ್. ಪರಿಮಳಾ, ಅರಣ್ಯ ವ್ಯವಸ್ಥಾಪನಾಧಿಕಾರಿ ಎ.ಎ. ಇಳಕಲ್ಲ ಇದ್ದರು.

ಅರಣ್ಯ ಹುತಾತ್ಮರ ಸ್ತೂಪಕ್ಕೆ ಗೌರವ ಪುಷ್ಪಗುಚ್ಚ ಸಮರ್ಪಣೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿಯಿಂದ ಹುತಾತ್ಮರ ಗೌರವ ಸೂಚಕವಾಗಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿದರು. ನಂತರ ಎರಡು ನಿಮಿಷ ಮೌನ ಆಚರಿಸಲಾಯಿತು. ಪರೇಡ್ ಕಮಾಂಡರ್ ನೇತೃತ್ವದಲ್ಲಿ ಪೊಲೀಸ್ ಪಡೆ, ವಾದ್ಯವೃಂದ ಗೌರವ ಸಲ್ಲಿಸಿತು.