ಸಮಾನತೆಯ ಸಂದೇಶ ಸಾರಿದ ನಾರಾಯಣ ಗುರು

| Published : Sep 12 2025, 01:00 AM IST

ಸಾರಾಂಶ

ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಿ ತಳ ಸಮುದಾಯಗಳ ಮೇಲೆ ನಿರಂತರ ಶೋಷಣೆ ದಬ್ಬಾಳಿಕೆ ನಡೆಯುತ್ತಿದ್ದಾಗ ಸಮಾನತೆಯ ಸಂದೇಶವನ್ನು ಸಾರಿದ ಮಹಾನುಭಾವ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.

ಸೊರಬ: ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಿ ತಳ ಸಮುದಾಯಗಳ ಮೇಲೆ ನಿರಂತರ ಶೋಷಣೆ ದಬ್ಬಾಳಿಕೆ ನಡೆಯುತ್ತಿದ್ದಾಗ ಸಮಾನತೆಯ ಸಂದೇಶವನ್ನು ಸಾರಿದ ಮಹಾನುಭಾವ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.

ತಾಲೂಕು ಆಡಳಿತ ಹಾಗೂ ಆರ್ಯ ಈಡಿಗ ಸಮಾಜ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಬಡವರ, ದೀನ ದಲಿತರ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಚಿಂತಕ ನಾರಾಯಣ ಗುರುಗಳು. ಸಮಾಜದಲ್ಲಿ ತೊಳಲಾಡುತ್ತಿದ್ದ ಮೂಢನಂಬಿಕೆ, ಅಂಧಾನುಕರಣೆ, ಜಾತಿಪದ್ಧತಿ, ಮಡಿವಂತಿಕೆ ವಿರುದ್ಧ ರಕ್ತ ರಹಿತ ಕ್ರಾಂತಿ ಮಾಡಿ ಸಮಾನತೆಯ ಸಮಾಜ ಕಟ್ಟಲು ಅವರ ಹೋರಾಟ ಎಂದಿಗೂ ಸ್ಮರಣೀಯವಾಗಿದೆ. ಮಹಾತ್ಮ ಗಾಂಧೀಜಿಯವರ ದಲಿತೋದ್ಧಾರ ಚಳುವಳಿ ಮತ್ತು ಆಚಾರ್ಯ ವಿನೋಬಾ ಭಾವೆಯವರ ಹೋರಾಟಕ್ಕೆ ಮೂಲ ಪ್ರೇರಣೆ ನಾರಾಯಣ ಗುರುಗಳಾಗಿದ್ದರು ಎಂದ ಅವರು, ಜನರಿಗೆ ಧಾರ್ಮಿಕ ಆಲೋಚನೆ, ಸ್ವಾತಂತ್ರ್ಯ, ನಿರ್ಲಕ್ಷ್ಯಕ್ಕೆ ಒಳಪಟ್ಟ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ದಾರ್ಶನಿಕರಾಗಿದ್ದರು ಹಾಗೂ ನಾರಾಯಣ ಗುರುಗಳ ಜೀವನ ಮತ್ತು ಹೋರಾಟದ ಚಿಂತನೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಸಾಮಾಜಿಕ ಚಿಂತಕ ರಾಜಪ್ಪ ಮಾಸ್ಟರ್ ಮಾತನಾಡಿ, ನಾರಾಯಣ ಗುರುಗಳ ಚಿಂತನೆಗಳು ಸಮಾಜದಲ್ಲಿನ ಹಿಂದುಳಿದ ಶೋಷಿತರ ಶ್ರೇಯಾಭಿವೃದ್ಧಿಗೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಸಾರ್ವಕಾಲಿಕ ಸತ್ಯಗಳಾಗಿದ್ದು, ಅವರನ್ನು ಯಾವುದೇ ಜಾತಿ ಮತ್ತು ಸಮುದಾಯಗಳಿಗೆ ಸೀಮಿತಗೊಳಿಸಬಾರದು ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುವ ಜಾತಿ ಸಮೀಕ್ಷೆಯಲ್ಲಿ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ತಾಲೂಕಿನ ದೀವರ ಸಮುದಾಯದವರು ಜಿಲ್ಲಾ ಸಂಘದ ತೀರ್ಮಾನದಂತೆ ದೀವರು ಜಾತಿಯನ್ನು ನಮೂದಿಸುವಂತೆ ಮನವಿ ಮಾಡಿಕೊಂಡರು.

ತಹಸೀಲ್ದಾರ್ ಮಂಜುಳಾ ಹೆಗಡಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಭೋಧನೆಗಳನ್ನು ಯುವ ಸಮುದಾಯ ಅರಿತುಕೊಳ್ಳಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅರ್ಯ ಈಡಿಗ ಸಂಘದ ಅಧ್ಯಕ್ಷ ಎಚ್.ಗಣಪತಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಅಂಕರವಳ್ಳಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕರವೇ ಅಧ್ಯಕ್ಷ ಬಲೀಂದ್ರಪ್ಪ ಚಿಕ್ಕಾವಲಿ, ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಮಧುರಾಯ ಜಿ. ಶೇಟ್, ಪ್ರೇಮ, ಪುರಸಭೆ ಮುಖ್ಯಾಧಿಕಾರಿ ಚಂದನ್, ಬಿಇಓ ಆರ್. ಪುಷ್ಪಾ, ತಾಪಂ ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಶಿವಣ್ಣ ನಡಹಳ್ಳಿ, ಸುಜಾಯತ್, ಕೆಡಿಪಿ ಸದಸ್ಯ ಸುರೇಶ್ ಬಿಳವಾಣಿ, ವಕೀಲ ವೈ.ಜಿ.ಪುಟ್ಟಸ್ವಾಮಿ, ನಿಂಗಪ್ಪ, ನಾಗರಾಜ್ ಕೈಸೋಡಿ, ಜಗದೀಶ್ ಕುಳವಳ್ಳಿ, ಜೆ.ಪ್ರಕಾಶ್, ಹನುಮಂತಪ್ಪ, ಭರತ್ ರಾಜ್ ತಾಳಗುಪ್ಪ, ಮೋಹನ್, ಪಾಣಿ ರಾಜಪ್ಪ, ಶಿವಾನಂದ ಪಾಣಿ, ಲಿಂಗೇಶ್, ಪ್ರಶಾಂತ್ ನಾಯಕ್, ನಾಗೇಶ್, ತ್ಯಾಗರಾಜ್, ಸೇರಿದಂತೆ ಮೊದಲಾದವರಿದ್ದರು.