ರಾಮನಗರ: ಇತ್ತೀಚಿನ ದಿನಗಳಲ್ಲಿ ಜನರು ಡಿಜಿಟಲ್ ಮಾಧ್ಯಮಗಳತ್ತ ಹೆಚ್ಚು ಒಲವು ತೋರುತ್ತಿದ್ದು, ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಹೇಳಿದರು.

ನಗರದ ಕುವೆಂಪು ನಗರದಲ್ಲಿರುವ ರಾಷ್ಟ್ರಕವಿ ಕುವೆಂಪು ಅಭಿವೃದ್ಧಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಗಮ ಸಂಗೀತ, ವಾದ್ಯ ಸಂಗೀತ, ಪೂಜಾ ಕುಣಿತ, ತಮಟೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾಪ್ರದರ್ಶನಗಳನ್ನು ಪ್ರೇಕ್ಷಕರು ಅನುಭವಿಸಬೇಕು. ಯುವ ಪೀಳಿಗೆಯು ವಿವಿಧ ಕಲಾ ಪ್ರಕಾರಗಳ ಪರಿಚಯ ಮತ್ತು ಅವುಗಳ ಮಹತ್ವವನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಜನಪದ ಹಾಗೂ ಸಾಂಸ್ಕೃತಿಕ ಕಲೆಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮವನ್ನು ಕುವೆಂಪು ಅಭಿವೃದ್ಧಿ ಉದ್ಯಾನವನದ ಅಧ್ಯಕ್ಷ ನಾಗರಾಜು ಉದ್ಘಾಟಿಸಿದರು. ವಿವಿಧ ಕಲಾ ತಂಡಗಳ ಸದಸ್ಯರು, ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

21ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಕುವೆಂಪು ನಗರದಲ್ಲಿರುವ ರಾಷ್ಟ್ರಕವಿ ಕುವೆಂಪು ಅಭಿವೃದ್ಧಿ ಉದ್ಯಾನವನದಲ್ಲಿ ನಡೆದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಕೆ.ಸತೀಶ್ ಮಾತನಾಡಿದರು.