ಕನ್ನಡಪ್ರಭ ವಾರ್ತೆ ಬೆಂಗಳೂರು
ನೀಟ್ ವಿಚಾರವಾಗಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದಕ್ಕೆ ಪ್ರತಿಯಾಗಿ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ದುಂಡಾರ್ವತನೆ ತೋರಿದ ಪರಿಣಾಮ ಬುಧವಾರ ದೊಡ್ಡ ಹೈಡ್ರಾಮಾವೇ ನಡೆಯಿತು.ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಯಿಂದ ಕ್ವೀನ್ಸ್ ರಸ್ತೆಗೆ ಕಡೆಗೆ ಹೊರಟಿದ್ದರು.
ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದೆ ಬಿಜೆಪಿ ನಾಯಕರು ಏಕಾಏಕಿ ಮುತ್ತಿಗೆ ಹಾಕಲು ಬರುತ್ತಿರುವ ವಿಚಾರ ತಿಳಿದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಕಂಟೋನ್ಮೆಂಟ್ ಬಳಿಯೇ ರಸ್ತೆಗೆ ಬ್ಯಾರಿಕೇಡ್ ಹಾಕಿ ಕೆಪಿಸಿಸಿ ಕಚೇರಿಗೆ ಬಳಿ ಬಾರದಂತೆ ತಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೆಲ ಕಾಲ ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು.ಬಿಜೆಪಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹರಿಹರ ಶಾಸಕ ಬಿ.ಪಿ.ಹರೀಶ್ ಕಾರಿನಲ್ಲಿ ನೇರವಾಗಿ ಕೆಪಿಸಿಸಿ ಕಚೇರಿ ಬಳಿಗೆ ಬಂದರು. ಅಲ್ಲಿಂದ ಕಂಟೋನ್ಮೆಂಟ್ ಕಡೆಗೆ ಹೋಗುವಾಗ, ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಮೊಟ್ಟೆ ತೆಗೆದು ಬಿ.ಪಿ.ಹರೀಶ್ ಅವರ ತಲೆಗೆ ಹೊಡೆದರು. ತಕ್ಷಣ ಪೊಲೀಸರು ಹರೀಶ್‌ರ ರಕ್ಷಣೆಗೆ ಧಾವಿಸಿದರು. ಇದೇ ಸಮಯಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ಕೆಪಿಸಿಸಿ ಕಚೇರಿ ಬಳಿ ಬಂದಾಗ, ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ಕಾರಿನ ಮೇಲೆ ಮೊಟ್ಟೆ ದಾಳಿ ನಡೆಸಿದರು. ಕಾರಿನ ಕಿಟಕಿ, ಬಾಗಿಲುಗಳಿಗೆ ಕೈಗಳಿಂದ ಗುದ್ದಿ ಘೋಷಣೆ ಕೂಗಿದರು. ತಕ್ಷಣ ಪೊಲೀಸರು ಮೊಟ್ಟೆ ಎಸೆದ ಓರ್ವ ಕಾಂಗ್ರೆಸ್ ಕಾರ್ಯಕರ್ತನನ್ನು ವಶಕ್ಕೆ ಪಡೆದರು. ಇದೇ ವೇಳೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದ ಬಿಜೆಪಿ ನಾಯಕರನ್ನು ಬಸ್‌ನಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾದರು.
ಬಸ್‌ಗೆ ಮುತ್ತಿಗೆ:
ಕೆಪಿಸಿಸಿ ಕಚೇರಿ ಎದುರೇ ಕರೆದೊಯ್ಯುವಾಗ ಕಾಂಗ್ರೆಸ್ ಕಾರ್ಯಕರ್ತರು ಆ ಬಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದರು. ಇದರಿಂದ ಕೆಲ ಕಾಲ ಹೈಡ್ರಾಮಾ ನಡೆಯಿತು. ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿ ನಿಯಂತ್ರಿಸಿದರು.
ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು:ಈ ಘಟನೆಯಿಂದ ರೊಚ್ಚಿಗೆದ್ದ ಬಿಜೆಪಿ ನಾಯಕರು ಪಾದಯಾತ್ರೆ ಮುಖಾಂತರ ಇನ್ಫೆಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಲಿಖಿತ ದೂರು ನೀಡಿದರು.