ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ವೇಳೆ ರಾಜ್ಯೋತ್ಸವದ ಸಂದೇಶ ನೀಡಿದ ಅವರು, ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಜೀವ ಭಾಷೆ, ಭಾವ ಭಾಷೆ, ಜೀವನದ ಅನ್ನದ ಭಾಷೆಯಾಗಿ ಕನ್ನಡಿಗರ ಉಸಿರಿನಲ್ಲಿ ಸದಾ ಹಚ್ಚಹಸಿರಾಗಿದೆ. ಕನ್ನಡದ ಪ್ರೇಮವನ್ನು ಅಜರಾಮರಗೊಳಿಸಿದ ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾಕವಿ ಕುವೆಂಪುರವರ ನುಡಿಗಳನ್ನು ಸಚಿವರು ಸ್ಮರಿಸಿದರು. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆಯನ್ನು ನೀಡಿದ ವಿಜಯಪುರ ಜಿಲ್ಲೆಯ ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ, ಶರಣ ಸಾಹಿತ್ಯ ಮತ್ತು ಸೂಫಿ ಸಾಹಿತ್ಯಗಳ ಮೂಲಕ ಕನ್ನಡ ತಾಯಿಯ ಸೇವೆಗೈದಿರುವ ಬಸವಾದಿ ಪ್ರಥಮರಿಗೆ, ಕಾಯಕಯೋಗಿ ಶರಣರಿಗೆ, ಸೂಫಿ ಸಂತರಿಗೆ, ದಾಸವರೇಣ್ಯರಿಗೆ, ದಾರ್ಶನಿಕರಿಗೆ ಬೃಹತ್ ವೇದಿಕೆ ಮೂಲಕ ಗೌರವ ಸಲ್ಲಿಸಿದರು. ಕನ್ನಡ ಭಾಷೆಯ ಶ್ರೇಷ್ಠತೆ ಮತ್ತು ಸಾರ್ವಭೌಮತೆಗಾಗಿ ಹಾಗೂ ಕನ್ನಡ ಭಾಷಿಕರಿಗಾಗಿ ಪ್ರತ್ಯೇಕ ಕನ್ನಡ ನಾಡಿನ ಏಕೀಕರಣದ ರಚನೆಯ ಅಗತ್ಯವನ್ನು ಮನಗಂಡು, ನಿರಂತರ ಹೋರಾಟ ನಡೆಸಿದ ನಿಸ್ವಾರ್ಥ ಕನ್ನಡದ ಕಲಿಗಳು ಸಂತೃಪ್ತಿ ಅನುಭವಿಸಿದ ದಿನವೇ 1956 ನವ್ಹೆಂಬರ್‌ 1ರಂದು ಮೈಸೂರು ರಾಜ್ಯ ಉದಯವಾದ ದಿನವಾಗಿದ್ದನ್ನು ಮೆಲುಕು ಹಾಕಿದರು. ವಿಶಾಲವಾದ ಕನ್ನಡ ನಾಡು ಮತ್ತು ನುಡಿಯು ಶತ-ಶತಮಾನಗಳಿಂದ ಹಲವಾರು ಅರಸು ಮನೆತನಗಳ ಆಡಳಿತಕ್ಕೆ ಒಳಪಟ್ಟಿತ್ತು. ಮೌರ್ಯರು, ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದವರು, ಬಹಮನಿ, ಆದಿಲ್ ಶಾಹಿ, ಸಾಮ್ರಾಜ್ಯಗಳ ಸುಲ್ತಾನರು, ಮೈಸೂರಿನ ಒಡೆಯರು, ಹೈದರ್-ಟಿಪ್ಪು ಸುಲ್ತಾನರು ಮತ್ತು ಮರಾಠಾ-ಪೇಶ್ವೆಗಳಂತಹ ಮನೆತನಗಳ ಸಾಮ್ರಾಟರು ಮತ್ತು ಆಡಳಿತಗಾರರೂ ಕೂಡ ಕನ್ನಡ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅಸ್ಮಿತತೆಗೆ ಅಮೂಲ್ಯ ಕೊಡುಗೆ ನೀಡಿದ್ದನ್ನು ಸ್ಮರಿಸಿದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮೇಯರ್‌ ಸಿದ್ರಾಮಪ್ಪ ಕರಡಿ, ಉಪಮೇಯರ್‌ ಸುಮಿತ್ರಾ ಜಾಧವ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಸಿ ಜುಫಿಶಾನ್ ಹಕ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಾಕ್ಸ್:

ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆ


ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಆಕರ್ಷಕ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ವಿವಿಧ ಇಲಾಖೆಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದವು. ವಿವಿಧ ಕಲಾ ತಂಡಗಳು, ಕನ್ನಡಮಯ ವಾತಾವರಣದ ಮೆರಗನ್ನು ಹೆಚ್ಚಿಸಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ನಾಡು-ನುಡಿ ಪ್ರತಿಬಿಂಬಿಸುವ ಆಕರ್ಷಕ ನೃತ್ಯ ಪ್ರದರ್ಶನ ಕ್ರೀಡಾಂಗಣದಲ್ಲಿ ನೆರೆದ ಜನಸ್ತೋಮವನ್ನು ರಂಜಿಸಿತು.

ವಿಠ್ಠಲ ಕೊಕಟನೂರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಐಆರ್‌ಬಿ ಪೋಲಿಸ್ ಪಡೆ, ನಾಗರಿಕ ಪೊಲೀಸ್ ಪಡೆ, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಎನ್‌ಸಿಸಿ ಸೀನಿಯರ್‌ ಡಿವಿಜನ್, ಶಾಂತಿನಿಕೇತನ ಶಾಲೆ, ಬಿಎಲ್‌ಡಿಇ ಬಾಲಕಿಯರ ಪ್ರೌಢ ಶಾಲೆ, ಕೆಜಿಎಚ್‌ಪಿಎಸ್-12 ದರ್ಗಾ ಶಾಲೆ, ತೊರವಿಯ ಕೆಜಿಎಂಪಿಎಸ್ ಶಾಲೆ, ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆ, ಸೇಂಟ್ ಜೋಸೆಫ್‌ ಶಾಲೆಯ ಸ್ಕೌಟ್ಸ ಹಾಗೂ ಗೈಡ್ಸ ತಂಡ, ಪುಲಕೇಶಿ ನಗರದ ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆ, ಗ್ಯಾಲಕ್ಸಿ ಶಾಲೆ, ಸೇಂಟ್ ಜೋಸೆಫ್‌ ಶಾಲೆ ಹಾಗೂ ಸುಶ್ರಾವ್ಯ ಸಂಗೀತದ ಸಂಯೋಜನೆಯ ಪೊಲೀಸ್ ವಾದ್ಯ ವೃಂದದ ತಂಡ ಭಾಗವಹಿಸಿ ಗಮನ ಸೆಳೆದವು.