ಸಾರಾಂಶ
ರಾಮನಗರ: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ 2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ಅಧಿಕಾರಿ- ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿ ನಿವೃತ್ತ ಸರ್ಕಾರಿ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದಲ್ಲಿ ಮಂಗಳವಾರ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ನಡಸಿದ ನಿವೃತ್ತ ಸರ್ಕಾರಿ ನೌಕರರು, ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು 2024ರ ಆಗಸ್ಟ್ 1 ರಿಂದ ನಗದಾಗಿ ಪಾವತಿ ಮಾಡಬೇಕು. 2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ, ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಆದೇಶದನ್ವಯ 2022ರ ಜುಲೈ 1 ರಿಂದ 2024ರ ಜುಲೈ 31ರವರೆಗೆ ನಿವೃತ್ತರಾದ - ನಿಧನ ಹೊಂದಿದ ಅಧಿಕಾರಿ - ನೌಕರರಿಗೆ ಪರಿಷ್ಕೃತ ವೇತನದನ್ವಯ DCRG, COMMUTATION (OPTION)(5)EL ENCASHMENT ಲೆಕ್ಕಾಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸುತ್ತಿರುವುದು ನಿವೃತ್ತಿ ಜೀವನ ಸಂಧ್ಯಾಕಾಲದಲ್ಲಿರುವ ನಮಗೆ ಅತೀವ ಆಘಾತವಾಗಿದೆ ಎಂದು ಧರಣಿ ನಿರತವರು ಬೇಸರ ವ್ಯಕ್ತಪಡಿಸಿದರು.2024ರ ಆಗಸ್ಟ್ ನಿಂದ ನಿವೃತ್ತಿ ಹೊಂದುವ ಅಧಿಕಾರಿ- ನೌಕರರು ಪರಿಷ್ಕತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯವು ಲಭ್ಯವಾಗುತ್ತಿದ್ದು, ಅವರಂತೆ ನಾವೂ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದೇವೆ.
ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ- ನೌಕರರಂತೆ ನಾವು ಕೂಡ 2022ರ ಜುಲೈ 1ರಿಂದಲೇ ಪಡೆಯಬೇಕಾಗಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು ಕೇಳುತ್ತಿಲ್ಲ. ಬದಲಿಗೆ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ DCRG, COMMUTATION (OPTION)(5)EL ENCASHMENT ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸ ಮಾತ್ರ ಕೇಳುತ್ತಿದ್ದೇವೆ.ನಮಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ನಿವೃತ್ತರಾದ ನೌಕರರಿಗೂ ಸಹ ಪರಿಷ್ಕೃತ ಮೂಲ ವೇತನದ ಮೇಲೆ DCRG, COMMUTATION (OPTION)(5)EL ENCASHMENT ಲೆಕ್ಕಾಚಾರ ಮಾಡಿ ನ್ಯಾಯಯೋಜಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ದೊರಕಿಸಿ ಕೊಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿಗೆ ಸರ್ಕಾರಿ ನೌಕರರ ಸಂಘವು ಬೆಂಬಲ ವ್ಯಕ್ತಪಡಿಸಿತು.ಧರಣಿಯಲ್ಲಿ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಸತೀಶ್, ಪದಾಧಿಕಾರಿ ಶಿವುಸ್ವಾಮಿ ಹಾಗೂ ನಿವೃತ್ತ ನೌಕರರಾದ ಚಿಕ್ಕಕೆಂಪೇಗೌಡ , ಚಿಕ್ಕವೀರಯ್ಯ, ನಟರಾಜ್ , ಚನ್ನೇಗೌಡ, ಗಂಗಾಧರ್ , ರವಿಕುಮಾರ್ ,ಕೆ.ವಿ.ರವೀಂದ್ರನಾಥ್ , ವಿಜಯ್ ಕುಮಾರ್ , ಶಿವಕುಮಾರ್ , ಕೆಂಪೇಗೌಡ ಮತ್ತಿತರರು ಭಾಗವಹಿಸಿದ್ದರು.