ಸಾರಾಂಶ
ಚನ್ನಗಿರಿ ಪಟ್ಟಣದ ಪುರಸಭೆ ವತಿಯಿಂದ ಪಿ.ಎಂ. ಸ್ವನಿಧಿ ಯೋಜನೆಯ ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರದ ವಿವಿಧ 8 ಯೋಜನೆಗಳ ಕುರಿತು ಅದರ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಬೀದಿನಾಟಕ ಮತ್ತು ಜಾಗೃತಿ ಕಾರ್ಯಕ್ರಮವನ್ನು ನಗರದ ಮುಖ್ಯ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆಸಲಾಯಿತು.
- ಪುರಸಭೆ ನೇತೃತ್ವದಲ್ಲಿ ಬೀದಿನಾಟಕ-ಜಾಗೃತಿ ಕಾರ್ಯಕ್ರಮದಲ್ಲಿ ಬಾಲಾಜಿ ರಾವ್ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಪುರಸಭೆ ವತಿಯಿಂದ ಪಿ.ಎಂ. ಸ್ವನಿಧಿ ಯೋಜನೆಯ ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರದ ವಿವಿಧ 8 ಯೋಜನೆಗಳ ಕುರಿತು ಅದರ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಬೀದಿನಾಟಕ ಮತ್ತು ಜಾಗೃತಿ ಕಾರ್ಯಕ್ರಮವನ್ನು ನಗರದ ಮುಖ್ಯ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆಸಲಾಯಿತು.ಜಿಲ್ಲಾಡಳಿತ, ಕೌಶ್ಯಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪುರಸಭೆ ಆಶ್ರಯದಲ್ಲಿ ನಡೆದ ಬೀದಿ ನಾಟಕದ ಉದ್ಘಾಟನೆಯನ್ನು ಪುರಸಭೆ ಸಮದಾಯ ಸಂಘಟನಾಧಿಕಾರಿ ಬಾಲಾಜಿ ರಾವ್ ನೆರವೇರಿಸಿದರು.
ಬಳಿಕ ಮಾತನಾಡಿದ ಬಾಲಾಜಿ ರಾವ್ ಅವರು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗೆ ಸರ್ಕಾರ 8 ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬೀದಿಬದಿ ವ್ಯಾಪಾರಿಗಳು ಕಚೇರಿಗೆ ಬಂದು ಮಾಹಿತಿ ಪಡೆಯಬೇಕು ಎಂದರು.ಸರ್ಕಾರ ಬೀದಿಬದಿಯ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ದರದಲ್ಲಿ ತಳ್ಳುವ ಗಾಡಿ ಸೇರಿದಂತೆ ವಿವಿಧ ಸೌಲಭ್ಯಗಳ ಮಾಹಿತಿಯನ್ನು ಪ್ರಚುರಪಡಿಸಲು ಬೀದಿನಾಟಕ ಮತ್ತು ಪುರಸಭೆ ವಾಹನದಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚುರ ಪಡಿಸಲಾಗುತ್ತಿದೆ ಎಂದರು.
ದ್ವಿತೀಯ ದರ್ಜೆ ಸಹಾಯಕ ಪ್ರಭುದೇವ್ ಮಾತನಾಡಿ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನೀವು ಮಾಡುವ ವ್ಯವಹಾರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳಿಂದ ಸೊಳ್ಳೆಗಳು ಉತ್ಪತ್ತಿಯಾಗಲಿವೆ. ಆದ್ದರಿಂದ ಪ್ರತಿಯೊಬ್ಬ ಬೀದಿಬದಿ ವ್ಯಾಪಾರಸ್ಥರು ಡಸ್ಟ್ ಬಿನ್‌ಗಳನ್ನು ಇಟ್ಟು ತ್ಯಾಜ್ಯಗಳನ್ನು ಅದರಲ್ಲಿಯೇ ಹಾಕಿ, ಪುರಸಭೆಯಿಂದ ಬರುವ ಕಸದ ಗಾಡಿಗಳಿಗೆ ತ್ಯಾಜ್ಯ ನೀಡಬೇಕು ಎಂದರು.ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಚೇರಿ ಸಿಬ್ಬಂದಿ ಎನ್.ಎಚ್. ಹರ್ಷಿತಾ, ಭಾಗ್ಯಶ್ರೀ, ಪುರಸಭೆಯ ಪೌರಕಾರ್ಮಿಕರು ಹಾಜರಿದ್ದರು.
- - - -29ಕೆಸಿಎನ್ಜಿ1:ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಬೀದಿ ನಾಟಕಕ್ಕೆ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಬಾಲಾಜಿ ರಾವ್ ಚಾಲನೆ ನೀಡಿದರು.