ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಹಿರಿಯರಿಗೆ ಗೌರವ ನೀಡದ ಸಮಾಜಕ್ಕೆ ಉಳಿಗಾಲವಿಲ್ಲ, ಸರ್ಕಾರ ವೃದ್ಧರಿಗಾಗಿಯೇ ಯೋಜನೆ ಘೋಷಿಸಿ ಅವರನ್ನು ಗೌರವಿಸುವ ಪವಿತ್ರ ಕಾರ್ಯ ಮಾಡಬೇಕಿದೆ ಎಂದು ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.ಭಾನುವಾರ ನಗರದ ಸಮುದಾಯ ಭವನದಲ್ಲಿ ಗೋಕಾವಿ ಗೆಳೆಯರ ಬಳಗ, ಚೌರಿ ಹಾಗೂ ಜೇಡರ ಅಭಿಮಾನಿ ಬಳಗ ಅಡಿಹುಡಿ-ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಎಸ್ ಚೌರಿ ಅಭಿನಂದನಾ ಸಮಾರಂಭ ಹಾಗೂ ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ ಮತ್ತು ಆದರ್ಶ ಗುರುಮಾತೆ ಸುಶೀಲಾ ಜೇಡರ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಹಲವು ವೃದ್ಧಾಶ್ರಮದಲ್ಲಿ ಹೆಸರಾಂತ ಲೇಖಕರು, ವಕೀಲರು, ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲರಂಥ ಮಹಾನ್ ದಿಗ್ಗಜರೇ ಇಂದು ವೃದ್ಧಾಶ್ರಮದಲ್ಲಿ ಬದುಕುತ್ತಿರುವುದು ನಮ್ಮ ದುರ್ದೈವ. ಸರ್ಕಾರ ಅಂತಹವರನ್ನು ಗುರುತಿಸಿ ಗೌರವದಿಂದ ನೋಡುವ ಕಾರ್ಯವಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಸ್ಥಾನವಿದ್ದು, ಮಕ್ಕಳು ಆ ಕಾರ್ಯ ಮಾಡದೆ ಇದ್ದಾಗ ಸರ್ಕಾರ ಅವರನ್ನು ಗೌರವಿಸುವ ಕಾರ್ಯ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಮಹಾನ್ ಸಾಹಿತಿಗಳು, ನಾಯಕರು ಹುಟ್ಟಿ ಬೆಳೆದ ನಾಡು. ಬೆಂಗಳೂರಿನಲ್ಲಿರುವ ಎಲ್ಲಾ ಸಾಹಿತ್ಯಿಕ ಅಕಾಡೆಮಿಗಳನ್ನು ಉತ್ತರ ಕರ್ನಾಟಕಕ್ಕೆ ತರಬೇಕು ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಶಿಕ್ಷಕರಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಸೃಷ್ಟಿಸುವ ಶಕ್ತಿಯಿದೆ. ಸೈನಿಕರು, ರೈತರು ಮತ್ತು ಶಿಕ್ಷಕರನ್ನು ಗೌರವಿಸುವ ಕಾರ್ಯ ಸಮಾಜ ಮಾಡಬೇಕು. ಶಿಕ್ಷಕ ತನ್ನಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಧಾರೆ ಎರೆದು ಮಕ್ಕಳ ಭವಿಷ್ಯ ನಿರ್ಮಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಮಹಾಂತೇಶ ತಾವಂಶಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಚೌರಿ ದಂಪತಿಯನ್ನು ಗೌರವಿಸಿ, ಸತ್ಕರಿಸಲಾಯಿತು.ವೇದಿಕೆಯಲ್ಲಿ ನವದೆಹಲಿಯ ಡಿ.ಮಹೇಂದ್ರ, ಐಎಎಸ್ ಅಧಿಕಾರಿ ಗಜಾನನ ಬಾಳಿ, ಬಿ.ವಿ. ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ. ಬಳಗಾರ, ಅಜೀತ ಮನ್ನಿಕೇರಿ, ಪ್ರೊ. ಚಂದ್ರಶೇಖರ ಅಕ್ಕಿ, ಮಾರುತಿ ಜಡಿನವರ, ಕೆ.ಎಂ. ಮಹಾದೇವಪ್ಪ, ಡಾ.ಲಕ್ಷ್ಮಣ ಚೌರಿ, ಸುಶೀಲಾ ಜೇಡರ, ಅಶೋಕ ಲಗಮಪ್ಪಗೋಳ, ಸಿಪಿಐ ಹನುಮಂತ ನೆರಳೆ, ಜಯಾನಂದ ಮಾದರ ಇದ್ದರು.
=ಆಂಗ್ಲ ಮಾಧ್ಯಮದಲ್ಲಿ ಕಲಿತವರು ಸಂಬಂಧಗಳನ್ನು ಅರಿಯಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಓದಿದವರು ಸಂಬಂಧಗಳನ್ನು ಗುರುತಿಸಿ ಗೌರವ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಹಾಗಾಗಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ. ನಿವೃತ್ತಿಯ ನಂತರ ರಕ್ಷಣಾತ್ಮಕವಾಗಿ ಬಾಳಬೇಕು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಧ್ಯಮದಲ್ಲಿಯೇ ಓದಿಸಿ ಸಮಾಜಕ್ಕೆ ಮಾದರಿಯಾಗಬೇಕು.
- ಕುಂ.ವೀರಭದ್ರಪ್ಪ ಕಾದಂಬರಿಕಾರ;Resize=(128,128))
;Resize=(128,128))
;Resize=(128,128))