ಸಾರಾಂಶ
ತುಮಕೂರು: ಭರತನಾಟ್ಯ ಕಲೆ ಎಂಬುದು ಸುಲಭವಾಗಿ ಒಲಿಯುವಂತಹದ್ದಲ್ಲ. ಅದಕ್ಕೆ ಧ್ಯಾನಾಸಕ್ತ ಮನಸ್ಸು ಇದ್ದರೆ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣೇಕರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಪುಷ್ಕರ್ ನೃತ್ಯ ಮತ್ತು ಸಂಗೀತ ಅಕಾಡೆಮಿ-ಬೆಂಗಳೂರು ವತಿಯಿಂದ ಆಯೋಜಿಸಿದ್ದ ಪುಷ್ಕರ್-2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಭರತ ನಾಟ್ಯವನ್ನು ಸೂಕ್ತ ಮಾರ್ಗದರ್ಶನದಲ್ಲಿ ಕಲಿತರೇ, ಜೀವನದಲ್ಲಿ ಬರುವ ಎಲ್ಲಾ ಕಷ್ಟ, ನಷ್ಟಗಳನ್ನು ಎದುರಿಸುವ ಚೈತನ್ಯ ಬರುತ್ತದೆ. ಇದು ಶೈಕ್ಷಣಿಕವಾಗಿಯೂ ಸಹ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.ಪೋಷಕರು ಮಕ್ಕಳನ್ನು ಭರತನಾಟ್ಯ ಕಲೆ ಕಲಿಯಲು ಪ್ರೇರೆಪಿ, ಪ್ರೋತ್ಸಾಹಿಸುವ ಮೂಲಕ ಪುರಾತನ ಕಲೆಯನ್ನು ಉಳಿಸುವ ಜವಾಬ್ದಾರಿಯಾಗಿದೆ. ಇದಕ್ಕಾಗಿ ಇಲ್ಲಿ ಆಗಮಿಸಿರುವ ಎಲ್ಲಾ ಪೋಷಕರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಮಾತನಾಡಿ, ಪುಷ್ಕರ್ ನಾಟ್ಯ ಸಂಸ್ಥೆಯ ಡಾ.ಸತ್ಯವತಿ ಅವರ ತಂದೆ ರಾಮನ್ ಸುಮಾರು 70 ವರ್ಷಗಳಿಂದ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. ಸಾವಿರಾರು ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಪರಂಪರೆಯನ್ನು ಮಕ್ಕಳು ಮುಂದುವರೆಸುವ ಮೂಲಕ ಕಲೆಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುತ್ತಿದ್ದಾರೆ ಎಂದರು.ಪತ್ರಕರ್ತ ಎಚ್.ಎನ್.ಮಲ್ಲೇಶ್ ಮಾತನಾಡಿ, ತುಮಕೂರು ಜಿಲ್ಲೆ ಕಲಾವಿದರ ತವರೂರು. ಜಿಲ್ಲೆಯ ಕಲೆಗೆ ಹಲವಾರು ಜನರ ಕೊಡುಗೆ ಇದೆ. ಅದರಲ್ಲಿ ರಾಮನ್ ಮತ್ತು ದೇವಕಿ ರಾಮನ್ ಅವರ ಕೊಡುಗೆ ಅಪಾರ. ಇಡೀ ಕುಟುಂಬ ಕಲಾ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಡಾ.ಸತ್ಯವತಿ, ಗುಣವತಿ, ಹರೀಶ್ ರಾಮನ್, ಗಿರೀಶ್ ರಾಮನ್ ಅವರುಗಳು ತಮ್ಮದೇ ಆದ ನೃತ್ಯ ಶಾಲೆಗಳನ್ನು ತೆರದು ಮಕ್ಕಳಿಗೆ ನೃತ್ಯ ಕಲಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯವಲ್ಲದೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಪುಷ್ಕರ್ ನೃತ್ಯ ಸಂಗೀತ ಶಾಲೆಯ ಮುಖ್ಯಸ್ಥರಾದ ಡಾ.ಸತ್ಯವತಿ.ಆರ್.ಮಾತನಾಡಿದರು. ರಾಜರಾಜೇಶ್ವರಿ ನೃತ್ಯ ಕಲಾಮಂದಿರದ ಗಿರೀಶ್ ರಾಮನ್, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಉಪಸ್ಥಿತರಿದ್ದರು.