ಇದ್ದೊಬ್ಬ ಮಗನೂ ಹೋದ, ಯಾರಿಗಾಗಿ ಬದುಕಲಿ! ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ತಾಯಿಯ ಮಾತು

| Published : Jan 04 2025, 12:34 AM IST / Updated: Jan 04 2025, 12:11 PM IST

ಇದ್ದೊಬ್ಬ ಮಗನೂ ಹೋದ, ಯಾರಿಗಾಗಿ ಬದುಕಲಿ! ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ತಾಯಿಯ ಮಾತು
Share this Article
  • FB
  • TW
  • Linkdin
  • Email

ಸಾರಾಂಶ

ರಾಜುವಿನ ತಾಯಿ ಮಲ್ಲಮ್ಮ ಅವರನ್ನು ಶಿರಸಿಯ ಕೃಷ್ಣ ಮುಗೇರ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ರವಿ ಮತ್ತು ರಾಜು ಎಂಬ ಇಬ್ಬರು ಮಕ್ಕಳಿದ್ದರು. ಕೃಷ್ಣ ಅವರು ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:  ಪತಿ, ಹಿರಿಯ ಮಗನನ್ನು ಕಳೆದುಕೊಂಡಿದ್ದೆ. ಈಗ ಇದ್ದೊಬ್ಬ ಮಗನನ್ನೂ ಆ ದೇವರು ಕಿತ್ತುಕೊಂಡ, ಯಾರಿಗಂತ ನಾನು ಬದುಕಲಿ...ಈ ಜೀವನಾನಾ ಸಾಕಾಗಿ ಹೋಗೈತ್ರಿ... ಏನ್‌ ಮಾಡಬೇಕು ಅನ್ನೋದಾ ತಿಳಿವಲ್ದು...

ಈಚೆಗೆ ಇಲ್ಲಿನ ಸಾಯಿ ನಗರದಲ್ಲಿ ಸಿಲಿಂಡರ್‌ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡು ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ರಾಜು ಮುಗೇರಿ (16) ತಾಯಿಯ ಮಾತುಗಳು. ಈ ಅವಘಡದಲ್ಲಿ 9 ಜನರು ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ 8 ಜನ ಮೃತಪಟ್ಟಿದ್ದರು. ಇವರಲ್ಲಿ ರಾಜು ಮುಗೇರಿ ಒಬ್ಬ. ಮನೆಯಲ್ಲಿ ಬಡತನ. ಮೃತನ ತಾಯಿ ಮಲ್ಲಮ್ಮ ಕಾಯಿಪಲ್ಲೆ ಮಾರಾಟ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಅಜ್ಜ-ಅಜ್ಜಿಯ ಆರೈಕೆ:

ರಾಜುವಿನ ತಾಯಿ ಮಲ್ಲಮ್ಮ ಅವರನ್ನು ಶಿರಸಿಯ ಕೃಷ್ಣ ಮುಗೇರ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ರವಿ ಮತ್ತು ರಾಜು ಎಂಬ ಇಬ್ಬರು ಮಕ್ಕಳಿದ್ದರು. ಕೃಷ್ಣ ಅವರು ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಹಿರಿಯ ಮಗ ರವಿ 3 ವರ್ಷವನಾಗಿದ್ದ ವೇಳೆ ಡೇಂಘಿಗೆ ಬಲಿಯಾದ. ಕೆಲ ವರ್ಷಗಳಲ್ಲಿ ತಂದೆ ಕೃಷ್ಣ ಮೃತರಾಗಿದ್ದಾರೆ. ಹಾಗಾಗಿ ಪತಿಯ ಮರಣಾನಂತರ ಮಲ್ಲಮ್ಮ ತನ್ನ ತಂದೆ-ತಾಯಿಯ ಬಳಿಯೇ ಇದ್ದು, ಕಾಯಿಪಲ್ಲೆ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಇದ್ದೊಬ್ಬ ಮಗ:

ಸಿಲಿಂಡರ್‌ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ ಮಲ್ಲಮ್ಮ ಇದ್ದೊಬ್ಬ ಮಗನನ್ನೂ ಕಳೆದುಕೊಂಡಿದ್ದಾಳೆ. ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಿಂದ ಮಗನನ್ನು ಬೆಳೆಸಿದ್ದಳು. ಅವನು ಕೇಳುವ ಶಾಲೆಯಲ್ಲಿ ಕಲಿಸುತ್ತಿದ್ದಳು. ಜತೆಗೆ ಕರಾಟೆ ತರಬೇತಿಗೂ ಸಹ ಕಳಿಸುತ್ತಿದ್ದಳು. ದೇವರ ಮೇಲೆ ಹೆಚ್ಚಿನ ಭಕ್ತಿ ಹೊಂದಿದ್ದ ರಾಜು ಹೋಗದಿರುವ ದರ್ಗಾ, ಮಠ, ಮಂದಿರಗಳಿಲ್ಲ. ಚಿಕ್ಕವನಾಗಿದ್ದರೂ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿ ಮೆಚ್ಚುಗೆ ಪಡೆದಿದ್ದ. ಮೊಹರಂ ಹಬ್ಬದಲ್ಲಿ ಹುಲಿವೇಷ ಧರಿಸಿದರೆ, ಮೈಲಾರ ಲಿಂಗೇಶ್ವರ, ಸಿದ್ದಪ್ಪಜ್ಜನ ಪಾಲಿಕೆ ಸೇವೆಯಲ್ಲೂ ಪಾಲ್ಗೊಳ್ಳುತ್ತಿದ್ದ.

ಅಯ್ಯಪ್ಪನೆಂದರೆ ಅಚ್ಚುಮೆಚ್ಚು

ರಾಜುವಿಗೆ ಅಯ್ಯಪ್ಪನೆಂದರೆ ಅಚ್ಚುಮೆಚ್ಚು. ಇಲ್ಲಿನ ಶಿರೂರ ಪಾರ್ಕಿನಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ಪ್ರತಿ ಶನಿವಾರ ಬೆಳಗ್ಗೆ ತೆರಳಿ ದರ್ಶನ ಪಡೆದ ಬಳಿಕವೇ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ. ಕಳೆದ ವರ್ಷವೂ ಅಯ್ಯಪ್ಪ ಮಾಲೆ ಧರಿಸುವುದಾಗಿ ತಾಯಿಯ ಬಳಿ ಹೇಳಿಕೊಂಡಿದ್ದ. ಆಗಲೂ ತಾಯಿ ಮುಂದಿನ ವರ್ಷ ಮಾಲೆ ಧರಿಸುವಂತೆ ಈಗ ಬೇಡ ಎಂದಿದ್ದರು. ಈ ವರ್ಷ ಮಾಲೆ ಧರಿಸುವುದಾಗಿ 4 ತಿಂಗಳ ಹಿಂದೆಯೇ ತಾಯಿಯ ಬಳಿ ಹೇಳಿಕೊಂಡಿದ್ದ. ಆದರೆ, ತಾಯಿಯು ನೀನಿಗ ಎಸ್ಸೆಸ್ಸೆಲ್ಸಿ ಕಲೆಯುತ್ತಿದ್ದು, ಈ ಬಾರಿ ಬೇಡ ಮುಂದಿನ ವರ್ಷ ಮಾಲೆ ಹಾಕುವಂತೆ ಎಂದು ಹೇಳಿದ್ದರು. ಹಾಗೂ ಅಜ್ಜ-ಅಜ್ಜಿಯೂ ಈ ಬಾರಿ ಮಾಲೆ ಧರಿಸದಂತೆ ತಾಕೀತು ಮಾಡಿದ್ದರು. ಆದರೆ, ಹಠಕ್ಕೆ ಬಿದ್ದ ರಾಜು ಮಾಲೆ ಧರಿಸಿದ್ದನು. ಈಗ ಇದೇ ಮಾಲೆ ಹಾಕಿಕೊಂಡು ದೇವರ ಪಾದ ಸೇರಿದ್ದಾನೆ ಎಂದು ಮಲ್ಲಮ್ಮ ನೊಂದು ನುಡಿಯುತ್ತಾರೆ.

ನನ್ನ ಮಗನಿಗೆ ದೇವರು ಎಂದರೆ ಬಾಳ ಪ್ರೀತಿ. ಓಣ್ಯಾಗ ಎಲ್ಲೆ ಮಠ, ಮಂದಿರ, ದೇವಸ್ಥಾನದಾಗ ಕಾರ್ಯಕ್ರಮಗಳಾದ್ರ ತಾನೇ ಓಡಾಡಿ ಕಾರ್ಯಕ್ರಮದಾಗ ಪಾಲ್ಗೊಳ್ಳುತ್ತಿದ್ದ. ಅವನ ಭಕ್ತಿನಾ ನೋಡಿಯೇ ಅಯ್ಯಪ್ಪ ತನ್ನತ್ರ ಕರ್ಕೊಂಡಾನ ಎಂದು ಮೃತ ರಾಜು ತಾಯಿ ಮಲ್ಲಮ್ಮ ಮುಗೇರಿ ಹೇಳಿದರು.

ಮಕ್ಕಳು, ಮೊಮ್ಮಕ್ಕಳು ನಮ್ಮ ಅಂತ್ಯ ಸಂಸ್ಕಾರದ ಶೃಂಗಾರ ಮಾಡೊ ಬದ್ಲಿಗೆ ನಾನಾ ಮುಂದ ನಿಂತು ನನ್ನ ಮೊಮ್ಮಗನ ಅಂತ್ಯ ಸಂಸ್ಕಾರದ ಶೃಂಗಾರ ಮಾಡುವಂಗಾತ್ರಿ. ಇಂತಾ ಪರಿಸ್ಥಿತಿ ಯಾವ ಶತ್ರೂಗೂ ಬರೋದು ಬ್ಯಾಡ ಎಂದು ರಾಜು ಅಜ್ಜ-ಅಜ್ಜಿ ಸಿದ್ದಪ್ಪ ಹರ್ಲಾಪುರ, ಯಲ್ಲಮ್ಮ ಹರ್ಲಾಪುರ ಕಣ್ಣೀರು ಸುರಿಸಿದರು.