ಸಾರಾಂಶ
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ರಾಜೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸ್ಥಳ ಪರಿಶೀಲನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಎಂ.ಡಿ.ರಾಜೇಶ್, ಕೊಪ್ಪ ಡಿಎಫ್ಒ ನಂದೀಶ್, ತಹಸೀಲ್ದಾರ್ ಸವದತ್ತಿ ಹಾಗೂ ಇತರ ಅಧಿಕಾರಿಗಳೊಂದಿಗೆ ಹೊನ್ನೇಕೊಡಿಗೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಸಮೀಪದಲ್ಲಿ ಪ್ರವಾಸೋದ್ಯಮಕ್ಕೆ ಗುರುತಿಸಿರುವ 3 ಎಕರೆ ಜಾಗ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ 4-5 ವಿಭಾಗ ಬರಲಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಜಿಲ್ಲೆಯಲ್ಲಿ ಇರುವ ಪ್ರವಾಸಿ ತಾಣ ಗುರುತಿಸಬೇಕಾಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಬರುವ ಪ್ರವಾಸಿ ತಾಣಕ್ಕೆ ಹೋಗಲು ಸಾರಿಗೆ ಸೌಲಭ್ಯ, ವಸತಿ ಸೌಕರ್ಯ ನೀಡಬೇಕು. ಈಗಾಗಲೇ ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಪ್ರದೇಶಗಳನ್ನು ಗುರುತಿಸಿದ್ದೇವೆ. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಪ್ರವಾಸಿಗರಿಗೆ ಎಲ್ಲಾ ಸೌಕರ್ಯ ಒದಗಿಸಿ ಅವರಿಂದ ಅಲ್ಪಹಣವನ್ನು ಸಹ ಪ್ರವಾಸೋದ್ಯಮ ನಿಗಮ ನಿರೀಕ್ಷೆ ಮಾಡುತ್ತದೆ ಎಂದರು.
ಪಶ್ಚಿಮ ಘಟ್ಟದಲ್ಲಿ ವಿಶೇಷವಾಗಿ ಹಲವಾರು ಮಠಗಳು ಹಾಗೂ ಪುರಾತನ ದೇವಸ್ಥಾನವಿದೆ. ಮಲೆನಾಡು ಭಾಗಕ್ಕೆ ಪ್ರವಾಸಿಗರು ಬಂದಾಗ ಶೃಂಗೇರಿ, ಧರ್ಮಸ್ಥಳ, ಹೊರನಾಡು, ಕಿಗ್ಗದ ದೇವಸ್ಥಾನ, ಸಿರಿಮನೆ ಜಲಪಾತ, ಭದ್ರಾ ಹಿನ್ನೀರಿನ ಪಕ್ಕದ ಜಂಗಲ್, ಭದ್ರಾ ಹಿನ್ನೀರಿನಲ್ಲಿ ಬೋಟ್ ವ್ಯವಸ್ಥೆ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಔಷಧಿ ವನ ಮುಂತಾದವು ಗಳನ್ನು ವೀಕ್ಷಣೆ ಮಾಡಬಹುದು. ಜೊತೆಗೆ ಜಂಗಲ್ ಸಫಾರಿ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಶನಿವಾರ ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದೇವೆ. ನರಸಿಂಹರಾಜಪುರದ ಭದ್ರಾ ಹಿನ್ನೀರಿನ ಪಕ್ಕದ ₹30 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆ ಸಮೀಪದಲ್ಲಿ 3 ಎಕರೆ ಜಾಗವನ್ನು ಪ್ರವಾಸೋದ್ಯಮಕ್ಕೆ ಗುರುತಿಸಲಾಗಿದ್ದು ಶಾಸಕರು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ರಾಜೇಶ್, ಕೊಪ್ಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷಾ, ಮಾಜಿ ಉಪಾಧ್ಯಕ್ಷ ಸುನೀಲ್ ಇದ್ದರು.
--- ಬಾಕ್ಸ್ ---ನರಸಿಂಹರಾಜಪುರ ತಾಲೂಕು ಕೇಂದ್ರ ಬಿಂದು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ನರಸಿಂಹರಾಜಪುರ ತಾಲೂಕನ್ನು ಕೇಂದ್ರ ಬಿಂದು ಮಾಡಲು ಮುಖ್ಯ ಕಾರಣ ತಾಲೂಕು ಕೇಂದ್ರದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇವಲ 40 ಕಿ.ಮೀ. ಮಾತ್ರ ದೂರವಿದ್ದು ವಿಮಾನ ನಿಲ್ದಾಣದಿಂದ 1 ಗಂಟೆಯಲ್ಲೇ ವಾಹನದಲ್ಲಿ ಪ್ರವಾಸಿಗರು ನರಸಿಂಹರಾಜಪುರಕ್ಕೆ ಬರಬಹುದು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಎಂ.ಡಿ.ರಾಜೇಶ್ ತಿಳಿಸಿದರು.ಜೊತೆಗೆ ನರಸಿಂಹರಾಜಪುರ ತಾಲೂಕಿನಲ್ಲಿ ತುಂಗಾ ನದಿ, ಭದ್ರಾ ನದಿ ಹರಿಯುತ್ತಿದೆ. ವನ್ಯಜೀವಿ ಇರುವ ಅಭಯಾರಣ್ಯ ಹತ್ತಿರದಲ್ಲೇ ಇದೆ. ಭದ್ರಾ ಹಿನ್ನೀರು ಸಹ ಇದೆ ಎಂದರು.
-- ಬಾಕ್ಸ್ ---ಟ್ರಕ್ಕಿಂಗ್, ಅಡ್ವೆಂಚರ್ ಟೂರಿಸಂಗೆ ಅವಕಾಶ
ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕಳೆದ ವರ್ಷವೂ ಚರ್ಚೆ ನಡೆಸಲಾಗಿತ್ತು. ಜಿಲ್ಲೆಗೆ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಸ್ತಾಪನೆಯಾಗಿತ್ತು. ಜಿಲ್ಲೆಯಲ್ಲಿ ವಿಶೇಷ ವಾಗಿ ಟ್ರಕ್ಕಿಂಗ್ ಟೂರಿಸಂ, ಅಡ್ವೆಂಚರ್ ಟೂರಿಸಂ, ಕೂಸ್ಗಲ್ ಗ್ರಾಮದಲ್ಲಿ ಜಂಗಲ್ ಸಫಾರಿ, ಬೋಟಿಂಗ್ ವ್ಯವಸ್ಥೆ ಮಾಡಲು ಅನುಕೂಲವಿದೆ. ಕಿಗ್ಗ ಸಮೀಪದಲ್ಲಿ ಸಿರಿಮನೆ ಜಲಪಾತಕ್ಕೆ ಅರಣ್ಯ ಇಲಾಖೆಯಿಂದ ₹1 ಕೋಟಿ ಖರ್ಚು ಮಾಡಿದ್ದೇವೆ. ಶಾಪಿಂಗ್ ಕಾಂಪ್ಲೆಕ್ಸ್ ಮಾಡಲು ಟೆಂಡರ್ ಕರೆದಿದ್ದೇವೆ. ಕೂಸ್ಗಲ್ ಗ್ರಾಮದಿಂದ ಬಾಳೆಹೊನ್ನೂರು,ಕಳಸ ಮಾರ್ಗದಲ್ಲಿ ಎಲಿಫಂಟ್ ಕ್ಯಾಂಪ್ ಮಾಡುವ ಪ್ರಸ್ತಾವನೆ ಇದೆ ಎಂದರು.