ಸಾರಾಂಶ
ಶ್ರೀ ಸೋಮೇಶ್ವರೋತ್ಸವ-2024 ಉದ್ಘಾಟಿಸಿದ ಬಸವನ ಬಾಗೇವಾಡಿ ಸಾಹಿತಿ ಅಶೋಕ ಹಂಚಲಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆದೇಶಪ್ರೇಮ, ಮಾತೃಪ್ರೇಮ ಹುಟ್ಟಿಸದ ಯಾವುದೇ ಶಿಕ್ಷಣ ವ್ಯರ್ಥವಾಗುತ್ತದೆ. ವಿದೇಶಿ ಚಿಂತಕರ ಕಣ್ಣಲ್ಲಿ ಭಾರತವು ಸದಾ ಪ್ರಜ್ವಲಿಸುವ ಜ್ಯೋತಿಯಾಗಿ ಕಂಗೊಳಿಸುತ್ತಲೇ ಬಂದಿದೆ ಎಂದು ಬಸವನ ಬಾಗೇವಾಡಿಯ ಹಿರಿಯ ಬೋಧಕ, ಸಾಹಿತಿ ಅಶೋಕ ಹಂಚಲಿ ಹೇಳಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ ಶ್ರೀ ಸೋಮೇಶ್ವರೋತ್ಸವ-2024 ಸಮಾರಂಭದ ಮೊದಲ ದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಕೇವಲ ನೆಲವಾಗಲಿ, ದೇಶವಾಗಲೀ ಆಗಿಲ್ಲ, ಇದೊಂದು ಚೇತನವಾಗಿದೆ ಎಂದರು.ಇಡೀ ಜಗತ್ತು ಕತ್ತಲಿನಲ್ಲಿ ತುಂಬಿರುವ ಹೊತ್ತಿನಲ್ಲಿ ನಾವು ಬೆಳಕಿಗೆ ಭಾರತದತ್ತ ನೋಡಬೇಕು ಎಂಬುದಾಗಿ ವಿದೇಶಿ ಚಿಂತಕರೊಬ್ಬರು ಹೇಳಿದ್ದಾರೆ. ವಿದೇಶಿ ಚಿಂತಕರ ಕಣ್ಣಿನಲ್ಲಿ ಭಾರತ ಹಿಂದಿನಿದಂಲೂ ಪ್ರಜ್ವಲಿಸುವ ಜ್ಯೋತಿಯಾಗಿ ಎನಿಸಿರುವುದಕ್ಕೆ ಈ ನೆಲದ ಸಂಸ್ಕೃತಿ, ಆಚಾರ, ವಿಚಾರ, ಆದರ್ಶ ಪುರುಷರ ಸಂದೇಶಗಳು, ಮಹನೀಯರ ಸಾಧನೆಗಳೂ ಕಾರಣವಾಗಿವೆ ಎಂದರು.
ಶಿಕ್ಷಣವೆಂದರೆ ಮಕ್ಕಳಲ್ಲಿ ಕರುಣೆ, ತ್ಯಾಗ, ಅಹಿಂಸೆ, ದೇಶಭಕ್ತಿಯಂತಹ ಉದಾತ್ತ ಆಲೋಚನೆಗಳನ್ನು ಹುಟ್ಟಿಸಬೇಕು. ಅಂತಹ ಕೆಲಸವನ್ನು ಶ್ರೀ ಸೋಮೇಶ್ವರ ಶಾಲೆ ನಿರಂತರ ಮಾಡುತ್ತಿದೆ. ಪಾಲಕರು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸದೇ, ಮುಗಿಲೆತ್ತರಕ್ಕೆ ಬೆಳೆಯುವ ಸಾಧಕರನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.ರಾಣೆಬೆನ್ನೂರು ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕಡು ಬಡತನದ ಹಿನ್ನೆಲೆಯ ಕೆ.ಎಂ.ಸುರೇಶ ಹಂತ ಹಂತವಾಗಿ ಬೆಳೆದು ಬಂದ ಸಾಧಕ. ಇಂತಹದ್ದೊಂದು ಶಿಕ್ಷಣ ಸಂಸ್ಥೆಯನ್ನು ಅವರು ಕಟ್ಟಿ, ಬೆಳೆಸಿರುವುದು ದೊಡ್ಡ ಸಾಧನೆಯಾಗಿದೆ. ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ವರ್ಷ ವರ್ಷಕ್ಕೂ ಶ್ರೀ ಸೋಮೇಶ್ವರೋತ್ಸವವು ಶಾಲಾ ಮಕ್ಕಳು, ಪಾಲಕರು, ಸಾರ್ವಜನಿಕರನ್ನು ತೊಡಗಿಸಿಕೊಂಡು, ದಾವಣಗೆರೆ ನಗರದಲ್ಲಿ ಉತ್ಸವದಂತೆ ಬೆಳೆಯುತ್ತಿದೆ. ಸಂಸ್ಥೆಯ ಪ್ರತಿಯೊಬ್ಬರ ಕೊಡುಗೆ, ಬದ್ಧತೆಯು ಆದರ್ಶವಾಗಿದೆ. ಸಂಸ್ಥೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಶುಭಾರೈಸಿದರು.ಹುಬ್ಬಳ್ಳಿ ಚಿನ್ಮಯ ಮಿಷನ್‌ನ ಸ್ವಾಮಿ ಕೃತಾತ್ಮನಂದರು ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಮಹಾಲಿಂಗಪ್ಪ ಯಾದವ್, ಫಿಜಿಯೋಥೆರಪಿಸ್ಟ್ ಡಾ.ಬಸವರಾಜ್ ಶಿವಪೂಜೆ ಅವರಿಗೆ ಸೋಮೇಶ್ವರ ಸಿರಿ ಗೌರವ ಪ್ರದಾನ ಮಾಡಲಾಯಿತು. ಸಂಸ್ಥೆ ಅಧ್ಯಕ್ಷ, ಹಿರಿಯ ವಕೀಲ ಡಾ.ಅಶೋಕ ರೆಡ್ಡಿ, ಸಂಸ್ಥೆ ಕಾರ್ಯದರ್ಶಿ ಕೆ.ಎಂ. ಸುರೇಶ, ಪಾಲಿಕೆ ಸದಸ್ಯ ಕೆ.ಎಂ.ವೀರೇಶ ಪೈಲ್ವಾನ್, ಡಾ.ಶ್ವೇತಾ, ಪ್ರಾಚಾರ್ಯರಾದ ವೀಣಾ, ಪ್ರಭಾವತಿ, ಶಿಕ್ಷಕಿ ಚಂದ್ರಕಲಾ, ಆಡಳಿತ ನಿರ್ದೇಶಕ ಪಿ.ಎನ್.ಪರಮೇಶ್ವರಪ್ಪ, ಸಂಸ್ಥೆ ಕಾರ್ಯದರ್ಶಿ ಕೆ.ಎಂ.ಸುರೇಶ್ ಇದ್ದರು. ಇದೇ ವೇಳೆ ಸೋಮೇಶ್ವರ ಗಾನ ಸಿರಿ, ಚದುರಂಗ ಸಿರಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
- - - * ಟಾಪ್ ಕೋಟ್ ಬರುವ ಶೈಕ್ಷಣಿಕ ಸಾಲಿನಿಂದ ಗೋಣಿವಾಡ ಗ್ರಾಮದ ಕ್ಯಾಂಪಸ್‌ನಲ್ಲಿ ಶ್ರೀ ಸೋಮೇಶ್ವರ ವಿಜ್ಞಾನ ಪಿಯು ಕಾಲೇಜು ಆರಂಭಿಸಿ, ಜೆಇಇ, ನೀಟ್ ಪರೀಕ್ಷೆ ಬರೆಯಲು ಮಕ್ಕಳಿಗೆ ಅವಕಾಶ ನೀಡುವುದು, ಕಡಿಮೆ ಹಣದಲ್ಲಿ ಉತ್ಕೃಷ್ಟವಾದ ಶಿಕ್ಷಣ ನೀಡುವ ಮೂಲಕ ಐಐಟಿಗೆ ಇಲ್ಲಿಂದ ಪ್ರತಿಭೆಗಳನ್ನು ಕಳಿಸುವಂತಹ ಆಶಯ ಹೊಂದಿರುವ ಸಂಸ್ಥೆ ಬದ್ಧತೆಯು ಹೆಮ್ಮೆಯ ವಿಚಾರ- ಅಶೋಕ ಹಂಚಲಿ, ಹಿರಿಯ ಸಾಹಿತಿ, ಬಸವನ ಬಾಗೇವಾಡಿ
- - - -3ಕೆಡಿವಿಜಿ6.ಜೆಪಿಜಿ: ದಾವಣಗೆರೆಯ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶುಕ್ರವಾರ ಶ್ರೀ ಸೋಮೇಶ್ವರೋತ್ಸವ-2024 ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಮಹಾಲಿಂಗಪ್ಪ ಯಾದವ್, ಫಿಜಿಯೋಥೆರಪಿಸ್ಟ್ ಡಾ.ಬಸವರಾಜ್ ಶಿವಪೂಜೆ ಅವರಿಗೆ ಸೋಮೇಶ್ವರ ಸಿರಿ ಗೌರವ ಪ್ರದಾನ ಮಾಡಲಾಯಿತು.