ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸ್ಥಳೀಯ ಶಾಸಕರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ನೇತೃತ್ವದಲ್ಲಿ ಆಯಾ ಕ್ಷೇತ್ರದಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳು ಉಳಿಸಲು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವ ಅಗತ್ಯವಿದೆ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕನ್ನಡ ಶಿಕ್ಷಕ ಜಿ.ರವೀಶ್‍ ಕುಮಾರ್ ಸಲಹೆ ಮಾಡಿದರು.

ಪಟ್ಟಣದ ಶ್ರೀರಂಗನಾಥ ಮೈದಾನದಲ್ಲಿ ತಾಲೂಕು ಆಡಳಿತ ಆಯೋಜಿಸಿದ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿ, ಇಂಗ್ಲಿಷ್‍ ವ್ಯಾಮೋಹದಿಂದ ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಇದೀಗ ಶ್ರೀರಂಗಪಟ್ಟಣದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕೊರತೆಯಿಂದ ಹಲವು ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕರು ಸದನದಲ್ಲಿ ಕನ್ನಡ ಕುರಿತ ಶಾಲೆಗಳ ಬಗ್ಗೆ ಮಾತನಾಡಬೇಕು. ಶಾಲೆಗಳ ಪುನರ್ ಜೀರ್ಣೋದ್ಧಾರ ಮಾಡುವಂತೆ ಕನ್ನಡ ಪರ ಸಂಘಟನೆಗಳು ಹಾಗೂ ಶಿಕ್ಷಕರ ಒಳಗೂಡಿ ಕನ್ನಡ ಶಾಲೆಗಳಿಗೆ ಮಕ್ಕಳ ಸೇರಿಸಲು ಪೋಷಕರಿಗೆ ಜಾಗೃತಿ ಕಾರ್ಯಕ್ರಮಗಳ ನಡೆಸಿ ಆಯಾ ಗ್ರಾಮಗಳಲ್ಲಿ ಮುಚ್ಚುತ್ತಿರುವ ಶಾಲೆಗಳಿಗೆ ಮಕ್ಕಳು ಬರುವಂತೆ ಮಾಡಬೇಕು ಎಂದು ಶಾಸಕರು ಹಾಗೂ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.

ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್‌ ಬಂಡಿಸಿದ್ಧೇಗೌಡ ಮಾತನಾಡಿ, ಕನ್ನಡ ಭಾಷೆಯನ್ನು ತಿರಸ್ಕರಿಸಿ ಅನ್ಯಭಾಷೆಗೆ ಹೆಚ್ಚು ಒತ್ತು ನೀಡಬೇಡಿ. ಹೊರ ರಾಜ್ಯದವರು ನಮ್ಮ ರಾಜ್ಯದ ಜನರ ಸೌಮ್ಯತ್ವಕ್ಕೆ ಹೆಚ್ಚು ಪ್ರೀತಿ ಮಾಡಿ ನಮ್ಮ ಜನರ ಆಶಯಗಳೊಂದಿಗೆ ಇಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಅವರಿಗೆ ಕನ್ನಡ ಕಲಿಸಬೇಕು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಪಡೆದ 32 ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.


ನಂತರ ತಹಸೀಲ್ದಾರ್ ಚೇತನಯಾದವ್‍ ಮಾತನಾಡಿದರು. ಈ ವೇಳೆ ತಾಪಂ ಇಒ ಚಂದ್ರು, ಮುಖ್ಯಾಧಿಕಾರಿ ರಾಜಣ್ಣ, ಬಿಇಒ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಧ್ಯಕ್ಷ ಸಿ.ಜೆ.ಶ್ರೀನಿವಾಸ್‍, ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗು, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ ಬಾಬು, ಕರವೇ ಸ್ವಾಮೀಗೌಡ , ಎಂ.ಸುರೇಶ್, ಬಸವರಾಜು,ಪುರುಷೋತ್ತಮ,ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕರ್ನಾಟಕ ರಕ್ಷಣಾ ಪಡೆ ಅಧ್ಯಕ್ಷೆ ಪ್ರಿಯಾರಮೇಶ್‍, ಜೈ ಕರ್ನಾಟಕ ಸಂಘಟನೆ ಅಧ್ಯಕ್ಷ ಕುಮಾರ್, ಅಲ್ಲಾಪಟ್ಟಣ ಕುಮಾರ್, ದಲಿತ ಸಂಘಟನೆ ಸುರೇಶ್‍, ಕೆ.ಟಿ ರಂಗಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕನ್ನಡ ಪರ ಇತರ ಸಂಘಟನೆಗಳ ಮುಖಂಡರು ಇದ್ದರು.