ಕನ್ನಡಪ್ರಭ ವಾರ್ತೆ ಮಳವಳ್ಳಿ
ಕನ್ನಡ ಭಾಷೆಯೊಳಗೆ ಅಡಗಿರುವ ಜ್ಞಾನ, ಮಾನವೀಯತೆ, ಸಮಾನತೆ ಮತ್ತು ಬದುಕಿನ ಮೌಲ್ಯ ಇತರೆ ಭಾಷೆಗಳಿಗೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಬಣ್ಣಿಸಿದರು.ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ಸಾರಿದ ಅವರು, ಎಲ್ಲ ಕನ್ನಡಿಗರನ್ನು ಒಂದೇ ರಾಜ್ಯದ ಅಡಿಯಲ್ಲಿ ಒಗ್ಗೂಡಿಸಬೇಕೆಂಬ ಕನಸಿಗೆ ರಾಜ್ಯದ ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಮತ್ತು ಕನ್ನಡಾಭಿಮಾನಿಗಳು ಕೈಜೋಡಿಸಿದ್ದರು. ಅವರ ಪರಿಶ್ರಮ ಹಾಗೂ ಹೋರಾಟದ ಫಲವಾಗಿ ಕರ್ನಾಟಕ ಎಂದು ಮರು ನಾಮಕರಣವಾಯಿತು ಎಂದರು.
ನಮ್ಮೊಂದಿಗೆ ಉಸಿರಾಡುವ ಕನ್ನಡ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ನೆಲದ ನೆನಪು. ಸಂಸ್ಕೃತಿಯ ಪ್ರತಿಬಿಂಬ, ಇತಿಹಾಸದ ಹೆಜ್ಜೆ ಗುರುತು ಮತ್ತು ನಮ್ಮ ಅಸ್ಮಿತೆಯ ಅಮೂಲ್ಯ ಭಾಗವಾಗಿದೆ. ಕರ್ನಾಟಕ ರಾಜೋತ್ಸವವನ್ನು ಬರೀ ಆಚರಣೆಗೆ ಸೀಮಿತವಾಗದೇ ನಮ್ಮ ಭಾಷೆಯ ಮೇಲಿನ ಪ್ರೀತಿ ಅಪೂರ್ಣವಾಗಿಸುವ ನಿಟ್ಟಿನಲ್ಲಿ ಕನ್ನಡವನ್ನು ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕವನ್ನಾಗಿಸಬೇಕು ಎಂದರು.ಈಗಿನ ಜಾಗತೀಕರಣದ ಯುಗದಲ್ಲಿ ಇತರೆ ಭಾಷೆಗಳನ್ನು ಕಲಿಯುವುದು ಜ್ಞಾನದ ವಿಸ್ತರಣೆಯ ಜೊತೆಗೆ ಬದುಕಿನ ಅವಕಾಶಗಳಿಗೆ ಮುಖ್ಯವಾಗಿದೆ. ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಕಲಿಯುವ ಪ್ರಯತ್ನದಲ್ಲಿ ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದರು.
ನಮ್ಮ ಭಾಷೆಗೆ ದೊರೆತಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯದ ಸಾಧನೆಗಿರುವ ಸಿಕ್ಕ ಕಿರೀಟವಾಗಿದೆ. ರಾಜೋತ್ಸವವನ್ನು ಬರೀ ನವೆಂಬರ್ ತಿಂಗಳಿಗೆ ಸೀಮತಗೊಳಿಸದೇ ನಮ್ಮ ಜೊತೆಗಿನ ಉಸಿರನ್ನಾಗಿಸಿಕೊಂಡು ಬದುಕು ಸಾಗಿಸೋಣ ಎಂದು ಕರೆ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರವೇ ತಾಲೂಕು ಅಧ್ಯಕ್ಷ ಎಚ್.ಇ.ಅಪ್ಪೇಗೌಡ, ತಾಲೂಕು ವೈದ್ಯಾಧಿಕಾರಿಯಿಂದ ಪದ್ನೊನತಿಗೊಂಡು ವರ್ಗಾವಣೆಗೊಂಡ ಡಾ.ಪಿ.ವೀರಭದ್ರಪ್ಪ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ಸೇರಿದಂತೆ ಹಲವು ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ವಿವಿಧ ಶಾಲಾ ಮಕ್ಕಳು ಹಾಗೂ ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು. ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ, ಲೋಕೋಪಯೋಗಿ ಇಲಾಖೆ ಎಇಇ ಎ.ಎಂ.ಸೋಮಶೇಖರ್, ಹಿಂದುಳಿದ ವರ್ಷಗಳ ಕಲ್ಯಾಧಿಕಾರಿ ವಿನೋದ್ ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಸಿಪಿಐ ಎಸ್.ಜಯಾನಂದ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮಲ್ಲಿಕಾರ್ಜುನಯ್ಯ ಪಾಲ್ಗೊಂಡಿದ್ದರು.