ಕನ್ನಡಪ್ರಭ ವಾರ್ತೆ ಹಾಸನ
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ಗ್ರಾಮೀಣ ಪ್ರದೇಶಗಳ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿರುವುದು ನೋವಿನ ಸಂಗತಿ. ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಕಾವೇರಿ ಸೌಂದರ್ಯ ಅವರು ಸರ್ಕಾರವನ್ನು ಮಾಜಿ ಸಚಿವ ಎಚ್. ಡಿ. ರೇವಣ್ಣ ಒತ್ತಾಯಿಸಿದರು.ನಗರದ ಡೇರಿ ವೃತ್ತದ ಬಳಿ ಇರುವ ಹಾಸನ ಹಾಲು ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಭಾನುವಾರದಂದು ಮಾಧ್ಯಮದೊಂದಿಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಟ್ಟಡ, ತರಗತಿ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಕೆಲವು ಕಡೆ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೆ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮೀಣ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹಾಸನದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ವರ್ಷ ಸುಮಾರು ೧೫೦ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗಿದ್ದು, ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವಿದೆ. ಆದರೆ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳಿಲ್ಲ. ವಿಶೇಷವಾಗಿ ಹೊರ ಜಿಲ್ಲೆಗಳಿಂದ ಬರುವ ಬಡ ವಿದ್ಯಾರ್ಥಿನಿಯರಿಗೆ ಸಮರ್ಪಕ ಹಾಸ್ಟೆಲ್ ವ್ಯವಸ್ಥೆಯಿಲ್ಲದೆ ನೆಲದ ಮೇಲೆ ಚಾಪೆ ಹಾಸಿಕೊಂಡು ವಾಸಿಸುವ ಪರಿಸ್ಥಿತಿ ಇದೆ ಎಂದು ಗಮನ ಸೆಳೆದರು. ಹೊಳೆನರಸೀಪುರ ತಾಲ್ಲೂಕಿನ ಕೆಪಿಎಸ್ ಶಾಲೆಯ ಸ್ಥಿತಿಯೂ ಶೋಚನೀಯವಾಗಿದೆ. ಎಲ್ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುವ ಈ ಶಾಲೆಯಲ್ಲಿ ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತರಗತಿಗಳನ್ನು ಹೊಂದಾಣಿಕೆ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ನಡೆಸುವ ಪರಿಸ್ಥಿತಿ ಇದೆ. ಈ ಶಾಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವಿಧಾನಸಭಾ ಕ್ಷೇತ್ರಕ್ಕೆ ಶಾಲಾ ಕಟ್ಟಡಗಳ ನಿರ್ಮಾಣಕ್ಕಾಗಿ ಸುಮಾರು ೫೧ ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂಬ ಮಾಹಿತಿ ಇದ್ದು, ಈ ಅನುದಾನದಲ್ಲಿ ಗ್ರಾಮೀಣ ಪ್ರದೇಶದ ಕೆಪಿಎಸ್ ಶಾಲೆಗಳಿಗೂ ಆದ್ಯತೆ ನೀಡಬೇಕು. ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳನ್ನು ಆರಂಭಿಸಿರುವುದನ್ನು ಉಲ್ಲೇಖಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಹಳ್ಳಿಹಳ್ಳಿಗಳಲ್ಲಿ ಶಾಲೆಗಳನ್ನು ನಿರ್ಮಿಸಲು ಒತ್ತು ನೀಡಿದ್ದರು ಎಂದು ಸ್ಮರಿಸಿದರು. ಗ್ರಾಮೀಣ ಶಾಲೆಗಳಿಗೆ ಅಗತ್ಯ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಹಾಸ್ಟೆಲ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರಿಗೆ ಸಮರ್ಪಕವಾಗಿ ನೀರು ದೊರೆಯದೆ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ಕೃಷಿ ಪಂಪ್ಸೆಟ್ಗಳಿಗೆ ಅಗತ್ಯವಾದ ವಿದ್ಯುತ್ ಪರಿವರ್ತಕಗಳು (ಟಿಸಿ) ದೊರೆಯದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.ನೀರಿನ ವಿಚಾರದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ತೋರಿಸುವ ಆಸಕ್ತಿಯನ್ನು ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವಲ್ಲಿಯೂ ತೋರಿಸಬೇಕು. ನೀರಿನ ಹಂಚಿಕೆ ಮತ್ತು ನಿರ್ವಹಣೆಯಲ್ಲಿ ಸಮರ್ಪಕ ಯೋಜನೆ ರೂಪಿಸದ ಪರಿಣಾಮ ರೈತರು ಬೆಳೆ ಬೆಳೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಪ್ರದೇಶಗಳಲ್ಲಿ ನೀರು ಹರಿಸಿದರೂ ಅದು ರೈತರ ಜಮೀನುಗಳಿಗೆ ತಲುಪದೆ ವ್ಯರ್ಥವಾಗುತ್ತಿದೆ. ಕೆರೆಗಳಿಗೂ ನೀರು ತುಂಬಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಳೆ ಮತ್ತು ನೀರಿನ ಕೊರತೆಯಿಂದಾಗಿ ಸುಮಾರು ೨.೨೦ ಲಕ್ಷ ಎಕರೆ ಪ್ರದೇಶದಲ್ಲಿ ಜೋಳದ ಬೆಳೆ ಸಂಪೂರ್ಣ ನಾಶವಾಗಿರುವ ಆತಂಕಕಾರಿ ಪರಿಸ್ಥಿತಿಯಿದೆ. ರೈತರು ಬೆಳೆ ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಬೆಳೆ ವಿಮೆ ಪರಿಹಾರ ಪಡೆಯಲು ರೈತರು ಪರದಾಡುವಂತಾಗಿದೆ. ಸರ್ಕಾರ ಕೂಡಲೇ ಬೆಳೆ ನಷ್ಟದ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು. ಕೃಷಿ ಪಂಪ್ಸೆಟ್ಗಳಿಗೆ ಟಿಸಿ ಅಳವಡಿಸುವ ವಿಚಾರದಲ್ಲಿಯೂ ರೈತರಿಗೆ ತೊಂದರೆಯಾಗುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ವೈಯಕ್ತಿಕವಾಗಿ ಟಿಸಿಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ೬೦ರಿಂದ ೭೦ ಸಾವಿರ ಟಿಸಿಗಳನ್ನು ವಿತರಿಸಲಾಗಿತ್ತು. ರೈತರ ಅನುಕೂಲಕ್ಕಾಗಿ ೪೮ಕ್ಕೂ ಹೆಚ್ಚು ವಿದ್ಯುತ್ ಉಪವಿಭಾಗಗಳನ್ನು ಸ್ಥಾಪಿಸುವ ಜೊತೆಗೆ ಹೊಸ ವಿದ್ಯುತ್ ಉಪಕೇಂದ್ರಗಳನ್ನೂ ಆರಂಭಿಸಲಾಗಿತ್ತು. ಆದರೆ ಈಗ ಟಿಸಿಗಳಿಗಾಗಿ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಕೆಎಂಎಫ್ನ ಆರ್ಥಿಕ ಪರಿಸ್ಥಿತಿ ಹಾಗೂ ಆಡಳಿತಾತ್ಮಕ ವಿಚಾರಗಳ ಕುರಿತು ಮಾತನಾಡಿದ ಅವರು, ಸಂಸ್ಥೆಯ ಉತ್ಪಾದಕರು ಮತ್ತು ಗ್ರಾಹಕರು ಇಬ್ಬರ ಹಿತಾಸಕ್ತಿಯನ್ನೂ ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ. ಕೆಎಂಎಫ್ಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಸಂಸ್ಥೆಯನ್ನು ಮುನ್ನಡೆಸಲಾಗಿದೆ. ಪ್ರಸ್ತುತ ಎದುರಾಗಿರುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ಸಂಬಂಧ ಬುಧವಾರ ಕೆಎಂಎಫ್ ಆಡಳಿತ ಮಂಡಳಿ ಸಭೆ ಕರೆಯಲಾಗಿದ್ದು, ಸಂಸ್ಥೆಯ ಆರ್ಥಿಕ ಸ್ಥಿತಿ, ಉತ್ಪಾದಕರ ಸಮಸ್ಯೆಗಳು ಹಾಗೂ ಗ್ರಾಹಕರ ಹಿತಾಸಕ್ತಿಗಳ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ಪತ್ರ ಬರೆದು ವಾಸ್ತವ ಸ್ಥಿತಿಯನ್ನು ತಿಳಿಸಲಾಗುವುದು ಎಂದು ಹೇಳಿದರು.