ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಭಾಗವಹಿಸಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡ ಭಾಷೆ ಮೂರು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ತನ್ನದೇ ಆದ ಗೌರವವನ್ನು ಗಳಿಸಿದೆ. ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿ ಸನ್ಮಾನಿತರಾಗಿರುವ ಎಲ್ಲ ಸಾಧಕರಿಗೂ ಅಭಿನಂದನೆ ಸಲ್ಲಿಸಿದರು. ಕನ್ನಡ ನಾಡನ್ನು ಕಟ್ಟಿ ಬೆಳೆಸಿದ ಹಿರಿಯರ ಕೊಡುಗೆಯನ್ನು ಸ್ಮರಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕನ್ನಡ ಸಂಘಟನೆಗಳಿಗೆ ಹೆಚ್ಚಿನ ಮಹತ್ವ ನೀಡಿ, ಆರ್ಥಿಕ ನೆರವು ಒದಗಿಸುವ ಮೂಲಕ ಸಂಘಟನೆಗಳನ್ನು ಬಲಪಡಿಸಿ ಯುವಜನರನ್ನು ಸಂಘಟಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಇಂತಹ ಪ್ರಯತ್ನಗಳು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಂಠಿತವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ೧,೮೨,೯೭೩ ಹೆಕ್ಟೇರ್ ಕೃಷಿ ಬೆಳೆ ಹಾಗೂ ೯೮,೨೮೭ ಹೆಕ್ಟೇರ್‌ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟು ೨,೭೧,೨೬೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರ ಒದಗಿಸಲು ಸುಮಾರು ₹ ೩೭೫ ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ರಾಜ್ಯ ಸರ್ಕಾರ ಬಡವರು, ದೀನದಲಿತರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಬದುಕು ಸುಧಾರಿಸುವ ಉದ್ದೇಶದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಪ್ರತಿ ತಿಂಗಳು ೧೦ ಕೆ.ಜಿ. ಅಕ್ಕಿ ನೀಡುವ ಮೂಲಕ ಬಡವರ ಆಹಾರ ಭದ್ರತೆಗೆ ನೆರವಾಗಲಾಗುತ್ತಿದೆ. ಇಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ತಿಳಿಸಿದರು.

ಹಾಸನದ ಬಹುದಿನಗಳ ಕನಸಾಗಿರುವ ವಿಮಾನ ನಿಲ್ದಾಣ ಯೋಜನೆಯನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಬೆಂಗಳೂರಿನಿಂದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಅಗತ್ಯ ಪ್ರಕ್ರಿಯೆಗಳಿಗೆ ಚಾಲನೆ ನೀಡಿ, ಮುಂದಿನ ವರ್ಷದೊಳಗೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನ ಮತ್ತು ನೆರವಿನ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಹಾಸನದ ಜನರ ಬಹುದಿನಗಳ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ಎರಡು-ಮೂರು ತಿಂಗಳಲ್ಲಿ ಆರಂಭಿಸಿಯೇ ತೀರುತ್ತೇವೆ ಎಂದು ಸಚಿವರು ಘೋಷಿಸಿದರು. ಅಲ್ಲದೆ, ಹಾಸನದ ಡಿಸಿ ಕಚೇರಿ ಕಟ್ಟಡಕ್ಕೆ ಅಗತ್ಯವಿರುವ ಸುಮಾರು ೩೦ ಕೋಟಿ ಅನುದಾನ ಮತ್ತು ಅನುಮೋದನೆ ದೊರಕಿಸಲು ಕ್ರಮ ಕೈಗೊಂಡಿದ್ದು, ಈ ವರ್ಷದಲ್ಲೇ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಹಾಸನದಲ್ಲಿ ಐಐಟಿ ಸ್ಥಾಪನೆಯ ಕನಸನ್ನು ನನಸಾಗಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಕೇಂದ್ರ ಸರ್ಕಾರದ ಗಮನ ಸೆಳೆದು ಈ ಯೋಜನೆಯನ್ನು ಜಿಲ್ಲೆಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ಮೂಡಿ ಬಂದಿತು. ವಿವಿಧ ಶಾಲೆಗಳ ಮಕ್ಕಳಿಂದ ಮೂಡಿಬಂದ ನೃತ್ಯ ರೂಪಕವನ್ನು ಅತ್ಯಂತ ಸೃಜನಶೀಲತೆಯಿಂದ ಪ್ರಸ್ತುತ ಪಡಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನ ಇದೇ ವೇಳೆ ಸನ್ಮಾನಿಸಿ ಗೌರವಿಸಿದರು. ಉತ್ತಮ ಪಥ ಸಂಚಲನಕ್ಕೆ ಬಹುಮಾನ ವಿತರಿಸಿದರು.


ಕಾರ್ಯಕ್ರಮದಲ್ಲಿ ಶಾಸಕ ಎಚ್. ಪಿ. ಸ್ವರೂಪ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಎಸ್ಪಿ ಶುಭನ್ವಿತಾ, ತಹಸೀಲ್ದಾರ್‌ ಗೀತಾ, ಶಾಲಾ ಶಿಕ್ಷಣಾ ಇಲಾಖೆಯ ಉಪನಿರ್ದೇಶಕರಾದ ಬಲರಾಮ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರಾನಾಥ್ ಮತ್ತಿತರರು ಹಾಜರಿದ್ದರು.ಫೋಟೋ:ಹಾಕಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಭಾಗವಹಿಸಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.