ತೆಕ್ಕಟ್ಟೆ ಹಯಗ್ರೀವ ಸಭಾಂಗಣದಲ್ಲಿ ಇಲ್ಲಿನ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25 ದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಲಾಯಿತು.
ಕುಂದಾಪುರ ತೆಕ್ಕಟ್ಟೆ ಯಶಸ್ವಿ ಕಲಾವೃಂದ ರಂಗಾರ್ಪಣ, ಅಭಿನಂದನಾ ಸಮಾರಂಭ
ಕುಂದಾಪುರ: ಇಲ್ಲಿನ ತೆಕ್ಕಟ್ಟೆ ಕೋಮೆಯ ಯಶಸ್ವಿ ಕಲಾವೃಂದ ಕಳೆದ 26 ವರ್ಷಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಲ್ಲದೆ, ಯಕ್ಷಗಾನಕ್ಕೆ ನೀಡಿದ ಕೊಡುಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ತೆಕ್ಕಟ್ಟೆ ಹಯಗ್ರೀವ ಸಭಾಂಗಣದಲ್ಲಿ ಇಲ್ಲಿನ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25 ದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ ತುಂಬಿಸುವ ಕಾರ್ಯ ನಡೆಯಬೇಕು ಎಂಬುದೇ ಅಧ್ಯಕ್ಷನಾಗಿ ನನ್ನ ಹೆಬ್ಬಯಕೆ. ಈ ನಿಟ್ಟಿನಲ್ಲಿ ಯಶಸ್ವಿ ಕಲಾವೃಂದ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿರುವುದು, ಯಕ್ಷಗಾನ ಕಮ್ಮಟಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದರು.
ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬೆಳೆಯುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಯಕ್ಷಗಾನಕ್ಕೆ ಈ ಭಾಗದಲ್ಲಿ ಯಶಸ್ವಿ ಕಲಾವೃಂದ ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.ರಾಜ್ಯ ರಾಜ್ಯೋತ್ಸವ ಪುರಸ್ಕೃತ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೋಟ ಸುರೇಶ್ ಬಂಗೇರ ಮತ್ತು ಐರ್‌ಬೈಲ್ ಆನಂದ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಿ ಮಚ್ಚಿನ, ಸಮಾಜ ಸೇವಕ ಸತೀಶ್ ಪೂಜಾರಿ ಹಾಗೂ ಕ್ರೀಡಾಪಟು ಸುದೀಪ್ ಶೆಟ್ಟಿ ಮಲ್ಯಾಡಿ ಅವರಿಗೆ ಅಭಿನಂದನೆ ನಡೆಯಿತು. ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಅವರನ್ನು ಗೌರವಿಸಲಾಯಿತು.
ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್ ಶೆಟ್ಟಿ, ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ, ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಮತ್ತಿತರರಿದ್ದರು.ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹೆರಿಯ ಮಾಸ್ಟರ್ ನಿರೂಪಿಸಿದರು. ಪೂಜಾ ಆಚಾರ್, ಪಂಚಮಿ ವೈದ್ಯ, ಪವನ್ ಆಚಾರ್, ಕಿಶನ್ ಪೂಜಾರಿ, ಹರ್ಷಿತಾ ಅಮೀನ್ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.