ಪ್ರಧಾನಿ ನರೇಂದ್ರ ಮೋದಿ ಅವರ ಅವಹೇಳನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಪಂಡ ರವಿ ಕಾಳಪ್ಪ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅವಹೇಳನ ಮಾಡಿರುವ ಕಿಡಿಗೇಡಿಗಳಿಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಆಗ್ರಹಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಒಂದು ದಿನ ಬಂಧಿಸಿ ಬಿಡುಗಡೆ ಮಾಡುವ ಕೆಲಸವಾಗಬಾರದು ಎಂದ ಅವರು, ಕಿಡಿಗೇಡಿಗಳನ್ನು ವಿಚಾರಣೆಗೊಳಪಡಿಸಿ ಈ ಘಟನೆ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸ್ ಕಂಡು ಹಿಡಿಬೇಕು ಎಂದು ಆಗ್ರಹಿಸಿದರು.ಇಂದು ಸಮಾಜದಲ್ಲಿ ಒಡಕು ತರುವ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸಿ ಅನಾಹುತ ಸಂಭವಿಸಿತ್ತು. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಟಿಪ್ಪುಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದ ಅವರು, ಟಿಪ್ಪು ಜಯಂತಿ ಆಚರಣೆ ಸಂಬಂಧ ಜಿಲ್ಲೆಯ ಶಾಸಕದ್ವಯರ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಧಾರ್ಮಿಕ ಕೇಂದ್ರಗಳನ್ನು ಕಟ್ಟಡ ನಿರ್ಮಾಣಕ್ಕೂ ಮೊದಲು ತಂತ್ರಿಗಳಲ್ಲಿ ಕೇಳಬೇಕಿತ್ತು. ಸುತ್ತಮುತ್ತಲಿನ ಸಾರ್ವಜನಿಕರು, ಗ್ರಾಮಸ್ಥರಲ್ಲಿ ಅಭಿಪ್ರಾಯ ಕೇಳಬೇಕು. ಇದು ಯಾವುದನ್ನು ಮಾಡದೇ ಏಕಾಏಕಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಭಾಗಮಂಡಲ ಮತ್ತು ತಲಕಾವೇರಿ ಪುಣ್ಯ ಕ್ಷೇತ್ರವಾಗಿದೆ. ಕಟ್ಟಡ ನಿರ್ಮಿಸಿ ಅತಿಥಿ ಗೃಹ ಅಥವಾ ಇನ್ನೇದರು ಮಾಡಿದ್ದಲ್ಲಿ ಇದರ ತ್ಯಾಜ್ಯಗಳು ಎಲ್ಲಿಗೆ ಹೋಗುತ್ತದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಟ್ಟಡ ಕಾಮಗಾರಿಯನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಯಾವೊಬ್ಬ ಮುಸ್ಲಿಂ ಸಮಾಜಬಾಂದವರು ಕೂಡ ಟಿಪ್ಪು ಜಯಂತಿಯನ್ನು ಆಚರಿಸಲು ಮನವಿ ಮಾಡಿಲ್ಲ. ಆದರೆ, ಸರ್ಕಾರದಲ್ಲಿ ನಡೆಯುತ್ತಿರುವ ಕಿತ್ತಾಟದಿಂದ ಹೊರಬರಲು ಟಿಪ್ಪುಜಯಂತಿ ಆಚರಣೆಗೆ ತಯಾರಿ ಮಾಡುತ್ತಿದ್ದಾರೆ. ದುಷ್ಟನ ಜಯಂತಿಯನ್ನು ಜಿಲ್ಲೆಯಲ್ಲಿ ಮಾಡುವುದು ಬೇಡ ಎಂದರು.ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಎಲ್ಲೆಡೆ ಸ್ಪೈಸಸ್ ಮಳಿಗೆಗೆಗಳು ತೆರದುಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಕಲಿ ಚಾಕೋಲೇಟ್‌ಗಳು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ದೂರು ನೀಡಿ ಪರಿಶೀಲನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅರುಣ್ ಕುಮಾರ್, ವಿ.ಕೆ.ಲೋಕೇಶ್, ವಕ್ತಾರ ತಳೂರು ಕಿಶೋರ್ ಸುದ್ದಿಗೋಷ್ಠಿಯಲ್ಲಿದ್ದರು.