ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು ತೀವ್ರವಾಗಿ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನ ಮಾಡಿ ವೀಡಿಯೋ ಹರಿಬಿಟ್ಟ ಪ್ರಕರಣವನ್ನು ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು ತೀವ್ರವಾಗಿ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೆ ಇದೇ ವೇಳೆ ಸ್ಪೈಸಸ್ ಅಂಗಡಿಗೆ ಮುತ್ತಿಗೆ ಹಾಕಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ಕೆಲಸ‌ ಮಾಡುತ್ತಿದ್ದ ಮೂವರು ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಗುರುವಾರ ಬೆಳಗ್ಗೆ ನಗರದ ಇಂದಿರಾ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಧಾನಿ ಬಗ್ಗೆ ಅವಹೇಳನ ಮಾಡಿದ ಯುವಕರಿಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಕೆಲ ಕಾಲ ರಸ್ತೆ ತಡೆ ನಡೆಸಿ ಕಾಲುನಡಿಗೆಯ ಮೂಲಕ ಡಿಪೋ ಬಳಿ ಇರುವ ಸ್ಪೈಸಸ್ ಅಂಗಡಿಗೆ ತೆರಳಿ ಮುತ್ತಿಗೆ ಹಾಕಿದರು. ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ಅಂಗಡಿಯ ಶೆಟ್ಲರ್ ಗೆ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅಂಗಡಿಗೆ ಕಲ್ಲು ಎಸೆತವಾದ ಘಟನೆಯೂ ನಡೆಯಿತು. ಇದರಿಂದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದರು.

ಕಾರ್ಯಕರ್ತರು, ಪೊಲೀಸರ ನಡುವೆ ತಳ್ಳಾಟ ನೂಕಾಟ:

ಮುಂಜಾಗ್ರತಾ ಕ್ರಮವಾಗಿ ನಗರದ ಪೊಲೀಸರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸಿದ್ದರಿಂದ ಅನಾಹುತ ತಪ್ಪಿತು. ಇನ್ನೂ ಅಂಗಡಿಗೆ ನುಗ್ಗಲು ಯತ್ನಿಸಿದ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ಬಳಿಕ ಮತ್ತಷ್ಟು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಪೊಲೀಸರ ನಡೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರ ಮನವೊಲಿಕೆಯ ಬಳಿಕ ಪ್ರತಿಭಟನಾಕಾರರು ಅಂಗಡಿಯಿಂದ ತೆರಳಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಂಜನ್ ಮಾತನಾಡಿ, ನರೇಂದ್ರ ಮೋದಿ ವಿಶ್ವಗುರು. ಆದರೆ ಇಲ್ಲಿರುವ ಭಯೋತ್ಪಾದಕರು, ಪಾಕಿಸ್ತಾನದ ಜೈ ಹೇಳುವವರು ತುಚ್ಛವಾಗಿ ಪ್ರಧಾನಿ ಬಗ್ಗೆ ವೀಡಿಯೋ ಮಾಡಿದ್ದಾರೆ. ಇವರನ್ನು ಕಂಡಲ್ಲಿ ಗುಂಡು ಹಾರಿಸುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಪಾಕಿಸ್ತಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ದೇಶದ ಗಾಳಿ, ನೀರು, ಅನ್ನ ತಿಂದು, ನಮ್ಮ ದೇಶದ ಪ್ರಧಾನಿ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಇಂತವರನ್ನು ಡಿ.ಕೆ. ಶಿವಕುಮಾರ್ ನಮ್ಮ ಬ್ರದರ್ಸ್ ಎಂದು ಹೇಳುತ್ತಾರೆ ಎಂದು ಹೇಳಿದರು.‌

ಕಠಿಣ ಕಾನೂನು ಕ್ರಮ:

ವಿಧಾನ ಪರಿಷತ್‌ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಪ್ರಧಾನಿಯ ಬಗ್ಗೆ ಅವಹೇಳನ ಮಾಡಿದ ಯುವಕರಿಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಮ್ಮ ಪಕ್ಷದ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಬೇಡಿ. ಟಿಪ್ಪು ಜಯಂತಿ ಗೆ ಈ ಸರ್ಕಾರ ಅವಕಾಶ ಮಾಡಿಕೊಡಲು ಸಿದ್ದವಾಗುತ್ತಿದೆ. ಪೊಲೀಸ್ ಇಲಾಖೆ ವಿನಾ ಕಾರಣ ತೊಂದರೆ ಕೊಟ್ಟರೆ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗೋಣ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಸ್ಪೈಸಸ್ ಶಾಪ್ ನಲ್ಲಿ ನಾಲ್ಕು ಮಂದಿ ಯುವಕರ ತಂಡ ಮೋದಿ ಅವರ ಬಗ್ಗೆ ಅಶ್ಲೀಲವಾಗಿ ನಿಂದಿಸುವ ಕೆಲಸ ಮಾಡಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಬಂಧಿಸಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತೆ ಅವರನ್ನು ಗಡಿಪಾರು ಮಾಡುವಂತಾಗಬೇಕು. ಜಿಲ್ಲೆ ಅಶಾಂತಿಯ ತಾಣವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಮನು ಮುತ್ತಪ್ಪ, ಮಹೇಶ್ ಜೈನಿ, ಅರುಣ್ ಶೆಟ್ಟಿ, ವಿ.ಕೆ. ಲೋಕೇಶ್, ಅನಿತಾ ಪೂವಯ್ಯ, ಕೆ.ಎಸ್. ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸ್ಪೈಸಸ್ ಅಂಗಡಿ ದಿಢೀರ್ ಬಂದ್!

ಪ್ರಧಾನಿ ಬಗ್ಗೆ ಅವಹೇಳನ ಮಾಡಿದ ನಾಲ್ವರು ಯುವಕರು ಕೆಲಸ ಮಾಡುತ್ತಿದ್ದ ಸ್ಪೈಸಸ್ ಅಂಗಡಿ ಎಂದಿನಂತೆ ತೆರೆದಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಅಂಗಡಿಗೆ ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಪೊಲೀಸರ ಸೂಚನೆಯ ಮೇರೆಗೆ ಅಂಗಡಿ ಮಾಲೀಕ ಸ್ಪೈಸಸ್ ಅಂಗಡಿಯನ್ನು ಬಂದ್ ಮಾಡಿ ಅಲ್ಲಿಂದ ತೆರಳಿದರು. ಡಿವೈಎಸ್ಪಿ ಸೂರಜ್, ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ರಾಜು ಅವರ ನೇತೃತ್ವದಲ್ಲಿ ಅಂಗಡಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆಯೇ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅಂಗಡಿಗೆ ಒದ್ದು, ತಮ್ಮ ಅಸಮಾಧಾನ ಹೊರ ಹಾಕಿದರು.

ಸುನಿಲ್ ಸುಬ್ರಮಣಿ ಆವೇಶ!

ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಸ್ಪೈಸಸ್ ಅಂಗಡಿಗೆ ಮುತ್ತಿಗೆ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರ ಮೇಲೆ ಅವಹೇಳ‌ನ ಮಾಡಿದವರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ ನೀವು ನಮ್ಮನ್ನು ತಡೆಯುವ ಪ್ರಯತ್ನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.