ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರು ವಿವಿಯ ಮೂವರಿಗೆ ಸ್ಥಾನ

| Published : Nov 23 2024, 01:16 AM IST

ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರು ವಿವಿಯ ಮೂವರಿಗೆ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಯ ಘನತೆ, ಕಾರ್ಯತತ್ಪರತೆ ಮತ್ತು ಜಾಗತಿಕ ಸಾಧನೆಗಳ ಪುಂಜಗಳಿಗೆ ಇದು ಕೈಗನ್ನಡಿ

ಕನ್ನಡಪ್ರಭ ವಾರ್ತೆ ಮೈಸೂರು

ಯುಎಸ್ಎಯ ಸ್ಟ್ಯಾನ್ ಫೋರ್ಡ್ ವಿವಿಯು ಪ್ರಕಟಿಸಿದ ಪ್ರತಿಷ್ಠಿತ ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರಾಸಾಯನಶಾಸ್ತ್ರ ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

ವಿವಿಯ ಘನತೆ, ಕಾರ್ಯತತ್ಪರತೆ ಮತ್ತು ಜಾಗತಿಕ ಸಾಧನೆಗಳ ಪುಂಜಗಳಿಗೆ ಇದು ಕೈಗನ್ನಡಿ ಹಿಡಿದಂತಾಗಿದೆ. ಮಾನಸಗಂಗೋತ್ರಿಯ ರಾಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಡಾ.ಕೆ.ಎನ್. ಮೋಹನ ಅವರು 2023 ರಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಕೆಲಸ ಮತ್ತು ಕೊಡುಗೆಗಳಿಗಾಗಿ ವಿಶ್ವ ಮಟ್ಟದ ಮನ್ನಣೆ ಪಡೆದುಕೊಂಡಿದ್ದಾರೆ.

ಸಾಮಾನ್ಯ ರಸಾಯನಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಹಾಗೂ ಭೌತರಾಸಾಯನಶಾಸ್ತ್ರದಲ್ಲಿ ಅನುಭವ ಪಡೆದಿರುವ ಡಾ. ಮೋಹನ ಅವರು ಸ್ಕೋಪಸ್ ಇಂಡೆಕ್ಸ್ಡ್ಜರ್ನಲ್ ನಲ್ಲಿ ಪ್ರಕಟಿಸಿರುವ 59 ಸಂಶೋಧನಾ ಲೇಖನ, 287 ಬಾರಿ ಉಲ್ಲೇಖಗೊಂಡಿವೆ. ಡಾ. ಮೋಹನ ಅವರು ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯ 85,30,851 ವಿಜ್ಞಾನಿಗಳಲ್ಲಿ 2.1494 ಸಂಯೋಜಿತ ಅಂಕಗಳೊಂದಿಗೆ 4,59,763ನೇ ಸ್ಥಾನ ಪಡೆದಿದ್ದಾರೆ.

ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್. ರಂಗಪ್ಪ ಅವರು ಈ ಪಟ್ಟಿಯಲ್ಲಿ 2.4764ರ ಸಂಯೋಜಿತ ಸ್ಕೋರ್ ಮತ್ತು 777 ಉಲ್ಲೇಖದೊಡನೆ 1,93,640ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಪ್ರಕಟಗೊಂಡಿರುವ ವಿಶ್ವದ ಅಗ್ರ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ 1960ರಿಂದ 2023 ರವರೆಗೆ ಪ್ರಕಟಗೊಂಡಿರುವ ಸಂಶೋಧನಾ ಲೇಖನವನ್ನು ಪರಿಗಣಿಸಿ ವೃತ್ತಿ ಜೀವನದ ಸಾಧಕರನ್ನೂ ಕೂಡ ಹೆಸರಿಸಲಾಗಿದೆ.

ಈ ಪಟ್ಟಿಯಲ್ಲಿ ಡಾ. ರಂಗಪ್ಪ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಸ್ಕೋಪಸ್ ಇಂಡೆಕ್ಸ್ಡ್ಜರ್ನಲ್ ನಲ್ಲಿ ಪ್ರಕಟಿಸಿರುವ 448 ಆರ್ಟಿಕಲ್ ಗೆ 6864 ಉಲ್ಲೇಖ ಮತ್ತು 3.3466 ಸಂಯೋಜಿತ ಸ್ಕೋರ್ ಮೂಲಕ 1,36,327ನೇ ಜಾಗತಿಕ ಶ್ರೇಣಿ ಪಡೆದಿದ್ದಾರೆ.

ಅವರೊಂದಿಗೆ ಮತ್ತೋರ್ವ ರಾಸಾಯನಶಾಸ್ತ್ರ ವಿಭಾಗದ ವಿಶ್ರಾಂತ ಯುಜಿಸಿ ಬಿಎಸ್ಆರ್ ಫ್ಯಾಕಲ್ಟಿ ಫೆಲೋ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಬಸವಯ್ಯ ಅವರು 2,16,487ನೇ ಸ್ಥಾನ ಪಡೆದಿದ್ದಾರೆ. ಡಾ.ಕೆ. ಬಸವಯ್ಯ ಅವರು ತಮ್ಮ ಸಂಶೋಧನೆ ಪ್ರಾರಂಭವಾದ ದಿನದಿಂದ 2022 ರವರೆಗೆ ಪ್ರಕಟಿಸಿರುವ 460 ಆರ್ಟಿಕಲ್ ಗಳಲ್ಲಿ ಸ್ಕೋಪಸ್ ಇಂಡೆಕ್ಸ್ಡ್ಜರ್ನಲ್ ಗಳಲ್ಲಿ ಪ್ರಕಟವಾದ 258 ಸಂಶೋಧನಾ ಲೇಖನಕ್ಕೆ ಮಾನ್ಯವಾದ 2046 ಉಲ್ಲೇಖಗಳು ಜಾಗತಿಕ ಶ್ರೇಣಿಯನ್ನು ತಂದು ಕೊಟ್ಟಿವೆ.

ಸ್ಟಾನ್ ಫೋರ್ಡ್ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಪಟ್ಟಿಯಲ್ಲಿ ಡಾ. ಬಸವಯ್ಯ ಅವರು 3.21 ಸಂಯೋಜಿತ ಸ್ಕೋರ್ ಪಡೆದುಕೊಂಡಿರುವುದು ಶ್ರೀಯುತರು ವಿಶ್ಲೇಷಣಾ ರಸಾಯನಶಾಸ್ತ್ರದಲ್ಲಿ ಮಾಡಿರುವ ಅಸಾಧಾರಣ ಕೆಲಸಕ್ಕೆ ಲಭಿಸಿರುವ ಪ್ರತಿಫಲವಾಗಿದೆ. ಹತ್ತು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯ ಸೇವೆ ಮತ್ತು ಸಕ್ರಿಯ ಸಂಶೋಧನೆಯಿಂದ ನಿವೃತ್ತರಾಗಿದ್ದರೂ, ಡಾ.ಕೆ. ಬಸವಯ್ಯ ಅವರು ಮಾಡಿರುವ ಕೆಲಸವು ವಿಶ್ವಾದ್ಯಂತ ಮನ್ನಣೆಗಳಿಸಿದ್ದು ಜಾಗತಿಕವಾಗಿ ವಿಶ್ಲೇಷಣಾ ಸಂಶೋಧನಾ ವಿಜ್ಞಾನಿಗಳ ಗಮನ ಸೆಳೆಯುತ್ತಿದೆ.

ಗಮನಾರ್ಹವಾಗಿ, ಅವರ ಹೆಸರು ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿವಿಯು ಪ್ರಕಟಿಸಿರುವ ವಿಶ್ವದ ಅಗ್ರ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಕಂಡುಬಂದಿರುವುದು ಡಾ.ಕೆ. ಬಸವಯ್ಯ ಅವರ ಸಂಶೊಧನಾ ಕೆಲಸ ಮಹತ್ವ ಮತ್ತು ಪ್ರಾಮುಖ್ಯತೆ ತೋರಿಸುತ್ತದೆ.

ಈ ಸಂಶೋಧನಾ ಸಾಧನೆಗಳು ಮೈಸೂರು ವಿವಿಯದ ಅಧ್ಯಾಪಕರ ಜಾಗತಿಕ ಪ್ರಭಾವ, ಶ್ರೇಷ್ಠತೆ ಸಂಶೋಧನಾ ಮಾರ್ಗದರ್ಶನದ ಪ್ರತಿಫಲ ಮತ್ತು ನಿರಂತರ ಪರಂಪರೆಯನ್ನು ಒತ್ತಿ ಹೇಳುತ್ತಿದ್ದು ಯುವ ವಿಜ್ಞಾನಿಗಳ ಆಸಕ್ತಿಯನ್ನು ಮುಮ್ಮಡಿಗೊಳಿಸಲು ಅನುವಾಗುತ್ತವೆ. ಈ ಪಟ್ಟಿ ಸಿದ್ಧಪಡಿಸಲು ಸ್ಕೋಪಸ್ ಜರ್ನಲ್ ಗಳಲ್ಲಿ ಪ್ರಕಟವಾದ ಆರ್ಟಿಕಲ್ ಗಳು ಮತ್ತು ಲೇಖಕರ ಪ್ರೊಫೈಲ್ ಪರಿಗಣಿಸಲಾಗಿದೆ.