ಗ್ರಾಮಸ್ಥರಿಂದ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ

| Published : Nov 23 2024, 01:16 AM IST

ಸಾರಾಂಶ

ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಸಂಪೂರ್ಣ ವಿಫಲ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿರುವ ಹಿನ್ನೆಲೆ ಶುಕ್ರವಾರ ಗ್ರಾಮಸ್ಥರು ರೈತರು ಪಟ್ಟಣದ ಒಂದನೇ ಮುಖ್ಯರಸ್ತೆಯಲ್ಲಿ ಇರುವ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪೂಜಾ ಅವರಿಗೆ ದೂರು ನೀಡಿದ್ದರು ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಕೆ.ಜಿ. ಹುಂಡಿ ಗ್ರಾಮದ ದಿವಂಗತ ರಾಜುಸಾಗರ್ ಎಂಬವವರ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 11.30ರ ಸಮಯದಲ್ಲಿ ಹುಲಿ ಪ್ರತ್ಯಕ್ಷವಾಗಿ ಪುರಸಭಾ ಸದಸ್ಯ ಲೋಕೇಶ್ ಅವರ ಮೇಲೆ ದಾಳಿ ನಡೆಸಿದ್ದು, ಅವರು ಪಾರಾಗಿದ್ದಾರೆ.

ಕಳೆದ ಹಲವು ದಿನಗಳಿಂದಲೂ ಪಟ್ಟಣದ ಶಾಂತಿಪುರ, ಬೋಚಿಕಟ್ಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಹುಲಿ ಕಾಣಿಸಿಕೊಂಡಿದ್ದು, ರೈತರು ಹಾಗೂ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

ಪ್ರತಿಭಟನೆಯಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಅರಣ್ಯ ಇಲಾಖೆಯವರು ರೈತರು ಹಾಗೂ ಜಾನುವಾರು ಮತ್ತು ಗ್ರಾಮಸ್ಥರನ್ನು ರಕ್ಷಿಸಬೇಕು, ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ಪೂಜಾರಿ ಅವರು ರೈತರು ಕರೆ ಮಾಡಿದಾಗ ಸ್ವೀಕರಿಸಿ ಉತ್ತರಿಸುತ್ತಿಲ್ಲ, ರಕ್ಷಣೆಗೆ ಮುಂದಾಗುತ್ತಿಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕೂಡಲೇ ಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಸಂಘದ ನಾಗರಾಜು, ಮಹದೇವ್, ಪುರಸಭಾ ಸದಸ್ಯರಾದ ವಿಶ್ವಕರ್ಮ ರಾಜು, ಲೋಕೇಶ್, ಶಿವಕುಮಾರ್, ಪ್ರವೀಣ್, ಸಿದ್ದರಾಜು, ಗುರುನಾಯಕ, ಸ್ವಾಮಿ, ಮಂಜು, ಚನ್ನನಾಯಕ, ಗ್ರಾಮದ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.