ದೇಶದ ಪ್ರತಿ ನಾಗರಿಕರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಕಲಿಸುವ ಮಹತ್ವ ಹೊಂದಿದ ಭಾರತದ ಸಂವಿಧಾನ ವಿಶಿಷ್ಟವಾಗಿದ್ದು, ಇದರ ಗೌರವ, ಘನತೆ ಎತ್ತಿ ಹಿಡಿಯುವ ಮತ್ತು ಅದರ ಮಹತ್ವ ಸಾರುವ ದಿನ ಇದಾಗಿದೆ.

ಮುಂಡರಗಿ: ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿ ಸಮಭಾವ ಮತ್ತು ಸಮಾನ ಅವಕಾಶ ಕಲಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವೆಲ್ಲ ಸಾಗೋಣ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.

ಬುಧವಾರ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿ ನಾಗರಿಕರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಕಲಿಸುವ ಮಹತ್ವ ಹೊಂದಿದ ಭಾರತದ ಸಂವಿಧಾನ ವಿಶಿಷ್ಟವಾಗಿದ್ದು, ಇದರ ಗೌರವ, ಘನತೆ ಎತ್ತಿ ಹಿಡಿಯುವ ಮತ್ತು ಅದರ ಮಹತ್ವ ಸಾರುವ ದಿನ ಇದಾಗಿದೆ ಎಂದರು.

ನಿವೃತ್ತ ಪ್ರಾಚಾರ್ಯ ಸತೀಶ ಪಾಸಿ ಮಾತನಾಡಿ, ಪ್ರಜಾಪ್ರಭುತ್ವದ ಗಟ್ಟಿ ಅಡಿಪಾಯವೇ ಸಂವಿಧಾನವಾಗಿದ್ದು, ಸಂವಿಧಾನದ ಆಶಯಗಳು ಈಡೇರಿದ ತೃಪ್ತಿ ಕಾಣುತ್ತಿಲ್ಲ. ಹೀಗಾಗಿ ಸಂವಿಧಾನ ಆಶಯ ಮಹತ್ವವನ್ನು ಪ್ರಮುಖವಾಗಿ ವಿದ್ಯಾರ್ಥಿಗಳು ಅರಿಯಬೇಕು ಎಂದರು.

ಡಿಎಸ್‌ಎಸ್‌ ಸಂಚಾಲಕ ಸೋಮಣ್ಣ ಹೊತಾಪೂರ ಎಚ್.ಡಿ. ಪೂಜಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಎಸ್. ಅಣ್ಣಿಗೇರಿ, ಮುಖ್ಯಾಧಿಕಾರಿ ಶಂಕರ ಹುಲಮ್ಮನವರ, ಪ್ರಾಣೇಶ ಬಸವರಾಜ, ಮಂಜುನಾಥ ಮೇಗಲಮನಿ, ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ದುರಗಪ್ಪ ಹರಿಜನ, ಲಕ್ಷಣ ತಗಡಿನಮನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿ, ತಾಪಂ ಇಒ ವಿಶ್ವನಾಥ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಅರಹುಣಸಿ ನಿರೂಪಿಸಿ, ವಂದಿಸಿದರು.