ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ರೈತರು ಬಿತ್ತನೆ ಬೀಜ, ಗೊಬ್ಬರ ಹಾಕುವ ವೇಳೆ ಇನ್ನಿಲ್ಲದ ತೊಂದರೆ ಅನುಭವಿಸುತ್ತಾರೆ. ಇಂತಹ ರೈತರಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ತಾಲೂಕಿನ ಕುರಡಿಕೇರಿ ಶಾಲೆಯ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ರೈತಸ್ನೇಹಿ ಬಿತ್ತನೆ ಬೀಜ, ಗೊಬ್ಬರ ಹಾಕುವ ಸಾಧನ ಕಂಡುಹಿಡಿದಿದ್ದಾರೆ. ಈಗಾಗಲೇ ಈ ಸಾಧನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದೆ.

ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಅಜಯ ಉಣಕಲ್ಲ ಹಾಗೂ ಅಕ್ಷಯ ಬೇಪೂರಿ ವಿಜ್ಞಾನ ಶಿಕ್ಷಕಿ ರಾಜಶ್ರೀ ಬೀಡಿ ಮಾರ್ಗದರ್ಶನದಲ್ಲಿ ಈ ಸಾಧನ ಕಂಡುಹಿಡಿದ್ದಾರೆ.

ರೈತರು ತಾವು ಬೆಳೆದ ಬೆಳೆಗಳಿಗೆ ಗೊಬ್ಬರ ಹಾಕುವಾಗ, ಬಾಗಿ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಸೊಂಟನೋವು, ಮಂಡಿನೋವು, ರಾತ್ರಿಯ ವೇಳೆಯಲ್ಲಿ ಕಾರ್ಯನಿರ್ವಹಿಸಬೇಕಾದ ಸಂದರ್ಭದಲ್ಲಿ ಕ್ರಿಮಿ, ಕೀಟಗಳು ಕಚ್ಚುವಿಕೆ ಸೇರಿದಂತೆ ಇನ್ನಿತರೆ ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಮುಕ್ತಿ ದೊರೆಯಬೇಕು ಎಂಬ ಉದ್ದೇಶದಿಂದ ಈ ಇಬ್ಬರು ವಿದ್ಯಾರ್ಥಿಗಳು " ಸ್ಮಾರ್ಟ್‌ ಫರ್ಟಿಲೈಸರ್‌ ಆ್ಯಂಡ್‌ ಸೀಡ್‌ ಸ್ಪ್ರೈಡಿಂಗ್‌ ಮಶಿನ್‌ " (Smart Fertilizer and Seed Spreading Machine) ಎಂಬ ರೈತಸ್ನೇಹಿ ಬೀಜ, ಗೊಬ್ಬರ ಹಾಕುವ ಸಾಧನ ಕಂಡುಹಿಡಿದ್ದಾರೆ.


ಕಡಿಮೆ ಖರ್ಚು:

ಈ ಸಾಧನವನ್ನು ಕೇವಲ ₹300-500 ಬಳಸಿ ನಿರ್ಮಿಸಲಾಗಿದೆ. ಇದರಲ್ಲಿ ಪಿವಿಸಿ ಪೈಪ್‌, ಕೊಡೆ(ಛತ್ರಿ), ಚಿಕ್ಕದಾದ ಸೋಲಾರ್‌ ಪ್ಯಾನಲ್‌, ಬೀಜ-ಗೊಬ್ಬರ ಸಂಗ್ರಹಿಸಲು ಡಬ್ಬಿ ಹಾಗೂ ಎಲ್‌ಇಡಿ ಲೈಟ್‌ ಅಳವಡಿಸಲಾಗಿದೆ. ರೈತರು ಹಗಲು ಹೊಲದಲ್ಲಿ ಕೆಲಸ ಮಾಡುವಾಗ ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿ ಬಳಸಬಹುದು. ಇದಕ್ಕೆ ಸೋಲಾರ್‌ ಅಳವಡಿಸಿದ್ದು ರಾತ್ರಿ ಎಲ್‌ಇಡಿ ಲೈಟ್‌ ಬಳಸಿಕೊಂಡು ಕೃಷಿ ಚಟುವಟಿಕೆ ನಿರ್ವಹಿಸಲು ಸಹಕಾರಿಯಾಗಿದೆ. ಇದನ್ನು ಒಬ್ಬರೇ ನಿರ್ವಹಿಸಬಹುದಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿ

ರಾಜ್ಯ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಏಕಸ್‌ ಹಾಗೂ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ನವೆಂಬರ್‌ನಲ್ಲಿ ನಡೆದ ಕರ್ನಾಟಕ ರಿಜಿನಲ್‌ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸ್ಪರ್ಧೆಯಲ್ಲಿ ಈ ಸಾಧನ ಪ್ರದರ್ಶಿಸಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಈಚೆಗೆ ಗುಜರಾತ್‌ನ ರಾಜಕೋಟದಲ್ಲಿ ಡೋಲಕಿಯಾ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೈನ್ಸ್ ಸೊಸೈಟಿ ಆಫ್ ಇಂಡಿಯಾದ INSEF- 2026 (ಇಂಡಿಯನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ ಫೇರ್‌) ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳದಲ್ಲಿ ಭಾಗವಹಿಸಿ ಸ್ಮಾರ್ಟ್‌ ಫರ್ಟಿಲೈಸರ್‌ ಆ್ಯಂಡ್‌ ಸೀಡ್‌ ಸ್ಪ್ರೈಡ್ಡಿಂಗ್‌ ಮಶಿನ್‌ " ಮಾದರಿ ಪ್ರಸ್ತುತ ಪಡಿಸಿ ಉತ್ತಮ ಮಾದರಿ Honourable Mention ಪ್ರಶಸ್ತಿ ಪಡೆದಿದ್ದಾರೆ. ರೈತರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಈ ಸಾಧನ ಕಂಡುಹಿಡಿಯಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರ ಸಹಕಾರದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಈ ಪ್ರಶಸ್ತಿಯಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ.

ರಾಜಶ್ರೀ ಬೀಡಿ, ಕುರಡಿಕೇರಿಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ