ನಾವುಗಳೆಲ್ಲಾ ಪ್ರಾಣಿ, ಪಕ್ಷಿಗಳಿಂದ ಪ್ರಮೋಷನ್ ಆಗಿ ಮನುಷ್ಯರಾಗಿದ್ದೇವೆ. ಕೇವಲ ಬದುಕಲು ಅನ್ನ ಸಾಕು. ಆದರೆ, ಮತ್ತೆ ಇಲ್ಲಿಂದ ಪ್ರಮೋಷನ್ ಆಗಬೇಕೆಂದರೆ ಒಳ್ಳೆಯ ವಿಚಾರ ಪಡೆದು ಮನಸ್ಸು ಬೆಳೆಸಬೇಕಿದೆ. ಮನುಷ್ಯ ಜನ್ಮವೇ ಬೇಸರವಾದರೆ ಇನ್ಯಾವ ಜನ್ಮ ಶ್ರೇಷ್ಟವಾಗಲು ಸಾಧ್ಯವಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕರುಣೆ ಇರುವನು, ಅಹಂಕಾರ ಪಡದವನು ಹಾಗೂ ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವವನು ದೇವರಿಗೆ ಬಹುಬೇಗ ಇಷ್ಟವಾಗುತ್ತಾನೆ. ಅವಮಾನ ಮಾಡುವ, ಟೀಕಿಸುವವರಿಗೆ ಮರು ಉತ್ತರ ನೀಡದೆ ಮೌನವಹಿಸಿ ನಿರ್ಲಕ್ಷ್ಯ ಮಾಡಿದರೆ ನಮ್ಮ ಜ್ಞಾನವೇ ಉತ್ತುಂಗಕ್ಕೇರಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಣ್ಯ ಸರ್ಕಲ್‌ನಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವದ ಪ್ರಯುಕ್ತ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದಿಂದ ಗುರುವಾರ ರಾತ್ರಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ನಾವುಗಳೆಲ್ಲಾ ಪ್ರಾಣಿ, ಪಕ್ಷಿಗಳಿಂದ ಪ್ರಮೋಷನ್ ಆಗಿ ಮನುಷ್ಯರಾಗಿದ್ದೇವೆ. ಕೇವಲ ಬದುಕಲು ಅನ್ನ ಸಾಕು. ಆದರೆ, ಮತ್ತೆ ಇಲ್ಲಿಂದ ಪ್ರಮೋಷನ್ ಆಗಬೇಕೆಂದರೆ ಒಳ್ಳೆಯ ವಿಚಾರ ಪಡೆದು ಮನಸ್ಸು ಬೆಳೆಸಬೇಕಿದೆ. ಮನುಷ್ಯ ಜನ್ಮವೇ ಬೇಸರವಾದರೆ ಇನ್ಯಾವ ಜನ್ಮ ಶ್ರೇಷ್ಟವಾಗಲು ಸಾಧ್ಯವಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ಎಂದರು.

ಕೆಟ್ಟ ಕೆಲಸ ಮಾಡಿದ ನಂತರ ಪಶ್ಚಾತ್ತಾಪ ಪಡುವ ಬದಲಿಗೆ ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಕೆಲಸ ಮಾಡಬೇಕು. ಕೆಟ್ಟ ಕೆಲಸ ಮಾಡದಂತೆ ಮನಸ್ಸಿಗೆ ಸಂಸ್ಕಾರ ಕೊಡಬೇಕಿದೆ. ನಮ್ಮ ದೇಹ ಚೆನ್ನಾಗಿರಲು ಒಳ್ಳೆಯ ಆಹಾರ ಸೇವಿಸುತ್ತೇವೆ. ಅದರಂತೆ ಮನಸ್ಸು ಚೆನ್ನಾಗಿರಲು ಒಳ್ಳೆಯ ವಿಚಾರ ಕೊಡಬೇಕಿದೆ ಎಂದರು.

ಸತ್ಸಂಗ, ಭಜನೆಯಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಯಾರನ್ನು ದ್ವೇಷ ಮಾಡದೇ ಎಲ್ಲರಲ್ಲಿಯೂ ಸ್ನೇಹ ಭಾವನೆಯನ್ನಿಟ್ಟುಕೊಂಡು ಜೀವಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರದ ಬೆಳವಣಿಗೆಗೆ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರ ಹಾಗೂ ಭಕ್ತರ ನಡುವೆ ಸಂಬಂಧಕ್ಕಾಗಿ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದ್ದಾರೆ. ರಾಷ್ಟ್ರದ ವಿವಿಧೆಡೆ ಸತ್ಸಂಗ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗಿ ಯಶಸ್ವಿಗೊಂಡಿವೆ ಎಂದರು.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಠದ ಸತ್ಸಂಗ ಕಾರ್ಯಕ್ರಮ ನಡೆಸುವ ಕಾರ್ಯ ಶ್ಲಾಘನೀಯ. ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆದರೆ ಒಳಿತಾಗಲಿದೆ. ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ಅನ್ನದಾನ ಮಾಡಿಕೊಂಡು ಮಠ ನಡೆಸಿಕೊಂಡು ಹೋಗಬಹುದಿತ್ತು. ಆದರೆ, ಅವರು ಜನರ ನೆಮ್ಮದಿಯನ್ನು, ಆರೋಗ್ಯವಂತರನ್ನಾಗಿ ನೋಡಬೇಕೆಂದು ಕನಸು ಕಂಡು ಶ್ರಮಿಸಿದರು ಎಂದರು.

ಭಕ್ತರಲ್ಲಿ ನೆಮ್ಮದಿ, ಆಧ್ಯಾತ್ಮಿಕ ಭಾವನೆ ಮೂಡಿಸಲು ಸತ್ಸಂಗ ಕಾರ್ಯಕ್ರಮ ಸಹಕಾರಿಯಾಗಲಿದೆ. ಮೌನ ಎಂಬುದು ಮತ್ತು ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳುವ ತಾಳ್ಮೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇದು ಎಲ್ಲರಿಗೂ ಅಗತ್ಯವಾಗಿದ್ದು ಅಂತಹ ಜ್ಞಾನವನ್ನು ದೇವರು ಕೊಡಲಿ ಎಂದರು.

ಸತ್ಸಂಗ ಎಲ್ಲಿಯೇ ನಡೆದರು ಅದರಲ್ಲಿ ಭಾಗಿಯಾಗಿ ಶಾಂತಿಯುತವಾಗಿ ಅಲ್ಲಿನ ವಿಚಾರಗಳನ್ನು ಮೈಗೂಡಿಸಿಕೊಂಡರೆ ಜೀವನ ಸಾರ್ಥಕವಾಗಲಿದೆ. ದೇವರನ್ನು ಕಾಣಲು ದುಡ್ಡು, ಅಂತಸ್ತಿನಿಂದ ಸಾಧ್ಯವಿಲ್ಲ, ಬದಲಿಗೆ ಒಳ್ಳೆಯ ಮನಸ್ಸಿದ್ದರೆ ಸಾಕು ಎಂದರು.

ಸತ್ಸಂಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿಣ್ಯ ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಬೆಳ್ಳಿ ಮಾದರಿಯ ಸಾರೋಟಿನಲ್ಲಿ ಕೂರಿಸಿ ಪೂಜಾ ಕುಣಿತ, ಮಂಗಳವಾದ್ಯ, ಜಾನಪದ ಕಲಾತಂಡ ಸೇರಿದಂತೆ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಶೈಲೇಂದ್ರನಾಥ ಸ್ವಾಮೀಜಿ, ಸಾಯಿಕೀರ್ತಿನಾಥ ಸ್ವಾಮೀಜಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ತಹಸೀಲ್ದಾರ್ ಜಿ.ಆದರ್ಶ್, ಡಿವೈಎಸ್ಪಿ ಬಿ.ಚಲುವರಾಜು, ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ವೆಂಕಟೇಶ್, ಕೊಣನೂರು ಹನುಮಂತು, ಆರ್.ಕೃಷ್ಣೇಗೌಡ, ಎನ್.ಜೆ.ರಾಜೇಶ್ ಸೇರಿದಂತೆ ಹಲವರು ಇದ್ದರು.