ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಕುಸ್ತಿ ಪಂದ್ಯಾವಳಿ

| Published : Jan 20 2024, 02:04 AM IST

ಸಾರಾಂಶ

ಕುಸ್ತಿಗೆ ಪ್ರೋತ್ಸಾಹ ಬೇಕಾಗಿದೆ. ಆಧುನಿಕ ಆಟಗಳ ಮೇಲಾಟದಲ್ಲಿ ಕುಸ್ತಿಯಂತಹ ಜನಪದ ಆಟಗಳನ್ನು ಪ್ರೋತ್ಸಾಹಿಸಲು ಸರ್ಕಾರಕ್ಕಿಂತ ಸಮಾಜವೇ ಮುಂದೆ ಬರಬೇಕು. ಗರಡಿಮನೆ ಸಂಸ್ಕೃತಿಯಿಂದ ಯುವಕರು ದೂರವಾಗುತ್ತಿರುವುದು ವಿಷಾದದ ಸಂಗತಿ. ಮತ್ತೆ ಗರಡಿಮನೆಗಳು ಯುವಕರಿಂದ ತುಂಬಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಬೇಕು

ಹಾನಗಲ್ಲ: ಹಾನಗಲ್ಲಿನ ರಾಮಲಿಂಗೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯದಲ್ಲಿ ಮಾಸೂರಿನ ರೋಶನ್, ಶಿವಮೋಗ್ಗದ ವರುಣಹಾಲೇಶ್ ಆರ್., ಬೆಳ್ಳಿ ಕಡೆ ಹಾಗೂ ಬಹುಮಾನ ಪಡೆದರು.

ಹಾನಗಲ್ಲಿನಲ್ಲಿ ಎರಡು ದಿನಗಳ ಕಾಲ ನಡೆದ ಕುಸ್ತಿ ಪಂದ್ಯದಲ್ಲಿ ಮಕ್ಕಳಾದಿಯಾಗಿ ಯುವಕರು, ನುರಿತ ಕುಸ್ತಿಪಟುಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಹಲವು ರೋಚಕ ಪಂದ್ಯಗಳು ನಡೆದವು. ಪ್ರೇಕ್ಷಕರ ಸಿಳ್ಳೆ ಚಪ್ಪಾಳೆಯ ನಡುವೆ ಯುವಕರ ಕುಸ್ತಿ ಸೆಣಸಾಟ ಆಕರ್ಷಣೀಯವಾಗಿತ್ತು.

ಕಿರಾಣಿ ಪೈಕಿ ಹಾಗೂ ಪರ್ಶಿ ಪೈಕಿ ಎರಡು ಹಂತದಲ್ಲಿ ಬೆಳ್ಳಿಯ ಕಡೆ ಇಡಲಾಗಿತ್ತು. ಕಿರಣಿ ಪೈಕಿ ಕುಸ್ತಿಯಲ್ಲಿ ಶಿವಮೋಗ್ಗದ ವರುಣಹಾಲೇಶ ಆರ್ ತಮ್ಮ ಶಕ್ತಿ ಕೈಚಳಕ ಪ್ರದರ್ಶಿಸಿ ಗೆದ್ದರು. ಅತ್ಯಂತ ಪ್ರಮುಖವಾದ ಅಂತಿಮ ಘಟ್ಟದ ಪರ್ಶಿ ಪೈಕಿ ಕುಸ್ತಿಯಲ್ಲಿ ಮಾಸೂರಿನ ರೋಶನ್ ಎದುರಾಳಿಯನ್ನು ಮಣಿಸಿ ಗೆದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕ ನಾಗೇಂದ್ರ ತುಮರಿಕೊಪ್ಪ, ಕುಸ್ತಿಗೆ ಪ್ರೋತ್ಸಾಹ ಬೇಕಾಗಿದೆ. ಆಧುನಿಕ ಆಟಗಳ ಮೇಲಾಟದಲ್ಲಿ ಕುಸ್ತಿಯಂತಹ ಜನಪದ ಆಟಗಳನ್ನು ಪ್ರೋತ್ಸಾಹಿಸಲು ಸರ್ಕಾರಕ್ಕಿಂತ ಸಮಾಜವೇ ಮುಂದೆ ಬರಬೇಕು. ಗರಡಿಮನೆ ಸಂಸ್ಕೃತಿಯಿಂದ ಯುವಕರು ದೂರವಾಗುತ್ತಿರುವುದು ವಿಷಾದದ ಸಂಗತಿ. ಮತ್ತೆ ಗರಡಿಮನೆಗಳು ಯುವಕರಿಂದ ತುಂಬಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಬೇಕು ಎಂದರು.

ಜಾತ್ರಾ ಮಹೋತ್ಸವ ಸಮಿತಿಯ ನಾಗೇಂದ್ರ ತುಮರಿಕೊಪ್ಪ, ಬಸವರಾಜ ಆಲದಕಟ್ಟಿ, ಪರಶುರಾಮ ನಿಂಗೋಜಿ, ಫಕ್ಕೀರಪ್ಪ ಬೆಂಚಳ್ಳಿ, ನರಸಪ್ಪ ಬಾಯಮ್ಮನವರ, ಶಿವಪ್ಪ ಬಳ್ಳಾರಿ, ವಾಸು ಕಮಾಟಿ, ಕಿರಣ ಮೂಡ್ಲಿಯವರ, ರಾಘು ಕಲಾಲ, ಸುರೇಶ ಪೂಜಾರ, ಜಗದೀಶ ಮಡಿವಾಳರ, ಅರ್ಜುನ ಚಿಕ್ಕಣ್ಣನವರ, ರಮೇಶ ವಾಗಿಲಕೊಪ್ಪ ಅವರ ಪರಿಶ್ರಮದಿಂದ ಜಾತ್ರೆ ಹಾಗೂ ಕುಸ್ತಿ ಪಂದ್ಯಾವಳಿಗಳು ಅರ್ಥಪೂರ್ಣವಾಗಿ ನೆರವೇರಿದವು.

ಕುಸ್ತಿ ನೋಡಲು ಒಂದು ಕಾಲಕ್ಕೆ ಜನಸಾಗರವೇ ಬರುತ್ತಿತ್ತು. ಹೊರ ರಾಜ್ಯಗಳಿಂದ ಕುಸ್ತಿಪಟುಗಳು ಇಲ್ಲಿಗೆ ಆಗಮಿಸುತ್ತಿದ್ದರು.ಆ ರೋಚಕ ಪಂದ್ಯಗಳು ಈಗ ನೆನಪು ಮಾತ್ರ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕುಸ್ತಿ ಆಟದ ರುಚಿ ಹಚ್ಚುತ್ತಿದ್ದರು. ತಮ್ಮ ಉದ್ಯೋಗದ ಜತೆಗೆ ಕುಸ್ತಿ ಆಡುವುದೇ ಆಗಿನ ಯುವಕರ ಹವ್ಯಾಸವಾಗಿತ್ತು. ಆ ಕಾಲ ಮತ್ತೆ ಬರಬೇಕು ಎಂದು ಸಂಸದರ ಆಪ್ತ ಕಾರ್ಯದರ್ಶಿ ರಾಜು ಪೇಟಕರ ಹೇಳಿದ್ದಾರೆ.