ಸಾರಾಂಶ
ಅಮರೇಶ್ವರಸ್ವಾಮಿ ಕಂದಗಲ್ಲಮಠಕುಕನೂರು: ಪಟ್ಟಣದ ನಿವಾಸಿ ಕಳಕಪ್ಪ ಪಲ್ಲೇದ್ ಅಪರಿಚಿತರ ಅಂತ್ಯಸಂಸ್ಕಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಮಾನವೀಯತೆ ಮೆರೆಯುತ್ತಿದ್ದಾರೆ.ಇವರು ಪಟ್ಟಣದಲ್ಲಿ ವಿಭೂತಿ ವ್ಯಾಪಾರ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ. ಸದ್ಯ 59 ವರ್ಷದ ಕಳಕಪ್ಪ ತಮ್ಮ 25ನೇ ವಯಸ್ಸಿನಿಂದ ಇಲ್ಲಿವರೆಗೆ (ಸತತ 34 ವರ್ಷದಿಂದ) ಅಂತ್ಯಸಂಸ್ಕಾರಗಳಲ್ಲಿ ಭಾಗಿಯಾಗುತ್ತಿದ್ದಾರೆ.ಮರಣ ಹೊಂದಿದ ನೆರೆ ಹೊರೆಯವರ ಅಂತ್ಯಸಂಸ್ಕಾರದಲ್ಲಿ ಪರಿಚಿತರೂ ಭಾಗಿಯಾಗದೇ ಇರುವ ಕೆಲವು ಸಂದರ್ಭಗಳಲ್ಲಿ ಪರಿಚಿತರೂ ಮಾತ್ರವಲ್ಲದೇ ಅಪರಿಚಿತರ ಶವಸಂಸ್ಕಾರಕ್ಕೆ ಕಳಕಪ್ಪ ಭಾಗಿಯಾಗಿ ಜೀವನದ ಸಾರ್ಥಕತೆ ಮೆರೆಯುತ್ತಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 2500ಕ್ಕೂ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.ಸುದ್ದಿ ಕೇಳಿದರೆ ಹೋಗಲು ಸಿದ್ಧ: "ಒಬ್ಬರು ಮರಣ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರ ಈ ವೇಳೆಗೆ ಇದೆ " ಎಂದು ಸುದ್ದಿ ಕೇಳಿದರೆ ಸಾಕು ಸರಿಯಾಗಿ ಅಂತ್ಯಸಂಸ್ಕಾರದ ವೇಳೆಗೆ ತೆರಳುವರು. ಅಂತ್ಯಸಂಸ್ಕಾರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿದ್ದು ಬರುತ್ತಾರೆ. ಯಾವುದೇ ಜಾತಿ, ಮತ, ಧರ್ಮದವರು ಇದ್ದರೂ ಎಲ್ಲರ ಅಂತ್ಯಸಂಸ್ಕಾರಕ್ಕೂ ತೆರಳುತ್ತಾರೆ.ಎಲ್ಲೇ ಇರಲಿ ಅಲ್ಲಿಗೆ ಹೋಗುತ್ತಾರೆ: ಕುಕನೂರು ಪಟ್ಟಣದ ಮಾತ್ರವಲ್ಲದೇ ಅನ್ಯ ಗ್ರಾಮ, ಜಿಲ್ಲೆಗೂ ತೆರಳಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುತ್ತಾರೆ. ಈ ಗ್ರಾಮದಲ್ಲಿ ಇಂಥವರು ಮರಣ ಹೊಂದಿದ್ದಾರೆ ಎಂದು ಕೇಳಿದರೆ ಸಾಕು, ಅಲ್ಲಿಗೆ ಸ್ವಂತ ಹಣದಲ್ಲಿ ಹೋಗುತ್ತಾರೆ. ಕೆಲವು ಸಲ ಕೊಪ್ಪಳ ಜಿಲ್ಲೆ ಮಾತ್ರವಲ್ಲದೇ ಅನ್ಯ ಜಿಲ್ಲೆ ಹಾಗು ದೂರದ ಗ್ರಾಮಗಳಿಗೂ ಹೋಗಿ ಬರುತ್ತಾರೆ. ತಮ್ಮ ವಿಭೂತಿ ವ್ಯವಹಾರ ಹದಗೆಡುವುದಿಲ್ಲವೇ? ನೀವು ಹೀಗೆ ಹೋದರೆ ಎಂದು ಕೇಳಿದರೆ, ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದಕ್ಕಿಂದ ಮತ್ತೊಂದು ಶ್ರೇಷ್ಠತೆ ಯಾವುದೂಂಟು, ಮನುಷ್ಯನ ಕೊನೆ ಅವಧಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದು ಒಂದು ಪುಣ್ಯದ ಕೆಲಸ ಎನ್ನುತ್ತಾರೆ ಕಳಕಪ್ಪ ಪಲ್ಲೇದ್.ನಾನು ಸುಮಾರು 34 ವರ್ಷದಿಂದ ಹಲವಾರು ಜನರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದೇನೆ. ಆ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದಕ್ಕಿಂತ ಶ್ರೇಷ್ಠ ಕೆಲಸ ಮತ್ತೊಂದಿಲ್ಲ ಎನ್ನುತ್ತಾರೆ ಕಳಕಪ್ಪ ಪಲ್ಲೇದ್.