ಸಾರಾಂಶ
- ಅಮೆರಿಕಾದಲ್ಲಿನ ನೌಕರಿಗೆ ರಾಜೀನಾಮೆ ಕೊಟ್ಟು ಹಠಯೋಗ ಕಲಿಯುತ್ತಿರುವ ಆಲಿಸನ್‌ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
2015ರಲ್ಲಿ ಜೂ. 21 ಅನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಲು ಶುರು ಮಾಡಿದ ಮೇಲೆ ಯೋಗ ಕಲಿಯಲು ಭಾರತಕ್ಕೆ ಬರುವ ವಿದೇಶಿಗರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕೂಬಿಹಾಳದಲ್ಲಿ ಅಮೆರಿಕಾದ ಯುವತಿಯೊಬ್ಬಳು ಹಠಯೋಗಾಭ್ಯಾಸ ಮಾಡುತ್ತಿದ್ದಾಳೆ.ಆಲಿಸನ್ ಈಕೆಯ ಹೆಸರು. ದಕ್ಷಿಣ ಅಮೆರಿಕಾದ ಚೀಲೆ ಪ್ರದೇಶದ ನಿವಾಸಿ. ಇವಳು ಮ್ಯಾನೇಜಮೆಂಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಯೋಗದ ಬಗ್ಗೆ ಮೊದಲಿಗೆ ಈಕೆಗೆ ಗಂಧ ಗಾಳಿಯೂ ಇರಲಿಲ್ಲವಂತೆ. ಬಳಿಕ ಜೀವನದ ಒತ್ತಡಗಳನ್ನು ಕಳೆದುಕೊಳ್ಳಲು ಯೋಗಾಭ್ಯಾಸ ಹೇಳಿ ಮಾಡಿಸಿದ್ದು ಎಂಬುದನ್ನು ತಿಳಿದು ಯೋಗ ಕಲಿಯಬೇಕೆಂಬ ಇಚ್ಛೆಯಾಗಿದೆ. ಪ್ರಾರಂಭದಲ್ಲಿ ಅಲ್ಪಸ್ವಲ್ಪ ಯೋಗ ಮಾಡುವುದನ್ನು ಕಲಿತ್ತಿದ್ದಾಳೆ. ಯೋಗದಲ್ಲೇ ಇನ್ನಷ್ಟು ಸಾಧನೆ ಮಾಡಬೇಕು ಎಂದುಕೊಂಡು ನಿಶ್ಚಿಯಿಸಿದ್ದಾಳೆ
ಕೆಲಸಕ್ಕೆ ರಾಜೀನಾಮೆ:ಯೋಗದಲ್ಲಿ ಸಾಧನೆ ಮಾಡಬೇಕೆಂದುಕೊಂಡು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಆಲಿಸನ್ ಯೋಗ ಕಲಿಯಲೆಂದು ಮೈಸೂರಿನ ಅಷ್ಟಾಂಗ ಯೋಗ ಶಾಲೆಗೆ ಆಗಮಿಸಿದ್ದಾಳೆ. ಅಲ್ಲಿ ಅಷ್ಟಾಂಗ ಯೋಗವನ್ನು ಅಭ್ಯಾಸ ಮಾಡಿದ್ದಾಳೆ.
ಅಲ್ಲಿ ಕೂಬಿಹಾಳದ ಬಸವ ಯೋಗ ಶಾಲೆಯಲ್ಲಿ ಕಲಿತಿರುವ ವಿಶಾಲಾಕ್ಷಿ ಎಂಬ ಯುವತಿಯ ಪರಿಚಯವಾಗಿದೆ. ಅಷ್ಟರಲ್ಲಿ ಆಗಲೇ ವಿಶಾಲಾಕ್ಷಿ ಕೂಬಿಹಾಳದಲ್ಲಿ ಹಠ ಯೋಗ ಮುಗಿಸಿದ್ದಳು. ಅವಳಿಂದ ಕೂಬಿಹಾಳದಲ್ಲಿನ ಯೋಗ ಶಾಲೆಯ ಬಗ್ಗೆ ಅರಿತುಕೊಂಡು ತಾನೂ ಆಕೆಯೊಂದಿಗೆ ಕೂಬಿಹಾಳಕ್ಕೆ ಆಗಮಿಸಿದ್ದಾಳೆ.ಕಳೆದ 13 ದಿನಗಳಿಂದ ಹಠಯೋಗದಲ್ಲಿ ತೊಡಗಿಸಿಕೊಂಡಿರುವ ಆಲಿಸನ್, ಇದೀಗ ಹಠಯೋಗದ ಅಂತಿಮ ಹಂತಕ್ಕೆ ಬಂದಿದ್ದಾಳೆ. ಇನ್ನೆರಡು ದಿನಗಳಲ್ಲಿ ಹಠಯೋಗವನ್ನು ಪೂರ್ಣಗೊಳಿಸಿ ಇಲ್ಲಿಂದ ಗೋವಾಕ್ಕೆ ತೆರಳಿ ಅಲ್ಲಿಂದ ಮರಳಿ ಸೌತ್ ಅಮೆರಿಕಾಕ್ಕೆ ತೆರಳಲಿದ್ದಾಳೆ. ಯೋಗವನ್ನೇ ಮುಂದೆ ಜೀವನದ ದಾರಿ ಮಾಡಿಕೊಳ್ಳಬೇಕು ಎಂದು ನಿಶ್ಚಿಯಿಸಿದ್ದಾಳಂತೆ. ಅಮೆರಿಕಾಕ್ಕೆ ಹೋದ ಬಳಿಕ ಅಲ್ಲಿ ಯೋಗ ಶಿಕ್ಷಕಿಯಾಗಬೇಕೆಂಬ ಕನಸು ಇವಳದು.
ಈ ಕುರಿತು ಮಾತನಾಡಿರುವ ಆಲಿಸನ್, ನಾನು ಮೈಸೂರಲ್ಲಿ ಅಷ್ಟಾಂಗ ಯೋಗ ಕಲಿಯಲು ಬಂದಿದ್ದೆ. ಹಠಯೋಗ ಕಲಿಯಬೇಕೆಂಬ ಇಚ್ಛೆಯಾಯಿತು. ಅಲ್ಲಿ ವಿಶಾಲಾಕ್ಷಿಯ ಪರಿಚಯವಾಗಿ ಇಲ್ಲಿಗೆ ಬಂದಿದ್ದೇನೆ. ಯೋಗ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯಬೇಕು. ಸರಿಯಾಗಿ ಕಲಿಯಬೇಕೆಂದರೆ ಭಾರತಕ್ಕೆ ಬರಬೇಕು. ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸುತ್ತಾಳೆ.ಯೋಗ ಶಿಕ್ಷಕ ಬಸವರಾಜ ಸಂಶಿ ಮಾತನಾಡಿ, ತಾವು 2012ರಿಂದ ಯೋಗ ತರಬೇತಿದಾರರಾಗಿ ಕೆಲಸ ಮಾಡುತ್ತಿದ್ದೇವೆ. ಯೋಗ ತರಬೇತಿಗಾಗಿ ನಮ್ಮ ಗ್ರಾಮಕ್ಕೆ ಅಮೆರಿಕಾದ ಆಲಿಸನ್ ಬಂದಿರುವುದು ಹೆಮ್ಮೆಯ ವಿಷಯ. ಸಾಕಷ್ಟು ಸೆಲಿಬ್ರಿಟಿಗಳಿಗೆ ಯೋಗ ಕಲಿಸಿಕೊಟ್ಟಿದ್ದೇನೆ. ಯೋಗದಿಂದ ರೋಗವೂ ದೂರವಾಗುತ್ತದೆ. ಭಾರತೀಯ ಸನಾತನ ಪರಂಪರೆ ಜಗತ್ತಿಗೆ ನೀಡಿದ ಕೊಡುಗೆ ಯೋಗ ಎಂದು ಹೇಳುತ್ತಾರೆ.
ಅಮೆರಿಕಾದಿಂದ ಯೋಗ ಕಲಿಯಲು ಬಂದಿರುವ ಆಲಿಸನ್ ಪ್ರತಿದಿನ ಮೂರ್‍ನಾಲ್ಕು ಗಂಟೆ ಯೋಗ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾಳೆ ಎಂದರು.