ಕನ್ನಡಪ್ರಭ ವಾರ್ತೆ ಕಮತಗಿ

ಸಮೀಪದ ರಾಮಥಾಳ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್‌ ಕೆಳಗೆ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ನಗರದ ಸಂತೋಷ ರಮೇಶ ಗೋಂಧಳೆ(20) ಮೃತ ವ್ಯಕ್ತಿ. ಜೂ.15 ರಂದು ಬೆಳಗ್ಗೆ 10ಕ್ಕೆ ಬ್ರಿಜ್ ಕೆಳಗೆ ಸ್ನಾನಕ್ಕೆಂದು ಸಂತೋಷ ಇಳಿದಿದ್ದ. ಬಳಿಕ ಎಷ್ಟೊತ್ತಾದರೂ ಸಂತೋಷ ಮೇಲೆ ಬಾರದಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಅಮೀನಗಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಅಗ್ನಿಶಾಮಕ ಸಿಬ್ಬಂದಿ ಕರೆಯಿಸಿ ಸಂಜೆಯವರೆಗೆ ನದಿಯಲ್ಲಿ ಮುಳಗಿದ್ದ ಸಂತೋಷನನ್ನು ಹುಡುಕಲು ಪ್ರಯತ್ನಿಸಿದರು. ಆದರೆ, ಸಂತೋಷ ಸಿಕ್ಕಿರಲಿಲ್ಲ. ಇದರಿಂದ ವಾಪಸ್‌ ತೆರಳಿದ್ದರು. ಜೂ.16ರಂದು ಸಂಜೆ 6 ಗಂಟೆಯ ಸುಮಾರಿಗೆ ನದಿ ದಡದಲ್ಲಿ ಯುವಕನ ಶವ ತೆಲುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಅಮೀನಗಡ ಪೊಲೀಸ್ ಠಾಣೆಗೆ ಪುನಃ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್ ಸಿಬ್ಬಂದಿ ಯುವಕನ ಶವ ಹೊರ ತೆಗೆದರು. ಸ್ಥಳದಲ್ಲಿಯೇ ಇದ್ದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು. ಅಮೀನಗಡ ಪೊಲೀಸ್ ಠಾಣೆ ಕ್ರೈಂ ವಿಭಾಗದ ಪಿಎಸೈ ವೈ.ಎಚ್.ಪಠಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.