ಸಾರಾಂಶ
ಆಧಾರ್ ನೋಂದಣಿ, ತಿದ್ದುಪಡಿ ಮಾಡಿಸಲು ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರು ಇಲ್ಲಿನ ಆಧಾರ್ ಸೇವಾ ಕೇಂದ್ರವು ಮುಚ್ಚಿರುವುದನ್ನು ಕಂಡು ಅಧಿಕಾರಿಗಳಿಗೆ ಶಾಪ ಹಾಕುತ್ತಾ, ತಾಲೂಕು ಕಚೇರಿಯತ್ತ ಸಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ತುರ್ವಿಹಾಳ
ಪಟ್ಟಣದ ನಾಡಕಚೇರಿಯಲ್ಲಿನ ಆಧಾರ್ ಕಾರ್ಡ್ ಸೇವಾ ಕೇಂದ್ರ 6 ತಿಂಗಳಿನಿಂದ ಸ್ಥಗಿತಗೊಂಡಿದ್ದು, ಅಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುತ್ತಲಿನ ಗ್ರಾಮಸ್ಥರು ಇದೇ ಕೇಂದ್ರವನ್ನು ಅವಲಂಬಿಸಿದ್ದು, ಪ್ರಸ್ತುತ ದಿನದಲ್ಲಿ ಕೆಲಸವಾಗದೇ ಹಿಂತಿರುಗುತ್ತಿದ್ದು ಬೇಸರಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನರು ಇದ್ದು, 32 ಹಳ್ಳಿಗಳಿಂದ ಸಾರ್ವಜನಿಕರು ನಿತ್ಯ ಅಲೆದಾಡುವ ಪರಸ್ಥಿತಿ ನಿರ್ಮಣವಾಗಿದೆ.ಆಧಾರ್ ನೋಂದಣಿ, ತಿದ್ದುಪಡಿ ಮಾಡಿಸಲು ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರು ಇಲ್ಲಿನ ಆಧಾರ್ ಸೇವಾ ಕೇಂದ್ರವು ಮುಚ್ಚಿರುವುದನ್ನು ಕಂಡು ಅಧಿಕಾರಿಗಳಿಗೆ ಶಾಪ ಹಾಕುತ್ತಾ, ತಾಲೂಕು ಕಚೇರಿಯತ್ತ ಸಾಗುತ್ತಿದ್ದಾರೆ. ಅಲ್ಲಿಯೂ ಒಂದೇ ಕೇಂದ್ರವಿದ್ದು, ನೂರಾರು ಜನರಿಗೆ ನೋಂದಣಿ ಮಾಡುವುದರಿಂದ ದಿನವಿಡಿ ಕೆಲಸ ಬಿಟ್ಟು ಕಾದು ಕುಳಿತು ಆಧಾರ್ ಮಾಡಿಸುವುದೇ ಒಂದು ದೊಡ್ಡ ಕೆಲಸವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ. ಆದ್ದರಿಂದ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿನ ಆಧಾರ್ ಸೇವಾ ಕೇಂದ್ರವನ್ನು ಆದಷ್ಟು ಬೇಗ ಪ್ರಾರಂಭಿಸಿ ಇಲ್ಲದಿದ್ದಲ್ಲಿ ಕಚೇರಿ ಮುಂಭಾಗದಲ್ಲಿಯೇ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಮಿದ್ ಅಲಿ ಅರಬ್ ತುರ್ವಿಹಾಳ ಹಾಗೂ ಶಾವಂತಮ್ಮ ಹಿರೇಬೇರ್ಗಿ ಅವರು ಎಚ್ಚರಿಕೆ ನೀಡಿದ್ದಾರೆ.