‘ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ - ಜಾರಿ ಮಾಡಿ: ಬಿ.ಕೆ.ಹರಿಪ್ರಸಾದ್‌

| Published : Oct 07 2024, 01:40 AM IST / Updated: Oct 07 2024, 08:00 AM IST

Bk hariprasad
‘ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ - ಜಾರಿ ಮಾಡಿ: ಬಿ.ಕೆ.ಹರಿಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ. ಅಧಿಕಾರಕ್ಕೆ ರಾಜಿಯಾಗದೆ ಮೊದಲು ವರದಿ ಜಾರಿ ಮಾಡಿ’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

 ಬೆಂಗಳೂರು : ‘ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ. ಅಧಿಕಾರಕ್ಕೆ ರಾಜಿಯಾಗದೆ ಮೊದಲು ವರದಿ ಜಾರಿ ಮಾಡಿ’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆಗ್ರಹಿಸಿದ್ದಾರೆ. ತನ್ಮೂಲಕ ಜಾತಿ ಗಣತಿ ವರದಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಪಕ್ಷದಲ್ಲೇ ಒತ್ತಡ ಹೆಚ್ಚಾದಂತಾಗಿದೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚ ಮೇಲೆ ಬಿದ್ದರೂ ಜಾತಿಗಣತಿ ಮಾಡುವುದಾಗಿ ರಾಹುಲ್‌ ಗಾಂಧಿಯೇ ಹೇಳಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಸಿದ್ಧವಾಗಿರುವ ವರದಿ ಬಗ್ಗೆ ಯಾಕೆ ಯೋಚಿಸುತ್ತಿದೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಾತಿಗಣತಿ ವರದಿ ತಕ್ಷಣ ಜಾರಿ ಮಾಡಲಿ. ಈ ಬಗ್ಗೆ ಮೀನಮೇಷ ಎಣಿಸುವುದು ಬೇಡ. ಜಾತಿಗಣತಿ ವರದಿ ಬಗ್ಗೆ ಯಾರ ವಿರೋಧದ ಪ್ರಶ್ನೆಯೂ ಇಲ್ಲ. ಇದು ಎಲ್ಲಾ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತದೆ. ಇದರಿಂದ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ. ಅದಕ್ಕೆ ಭಯ ಯಾಕೆ ಪಡಬೇಕು ಎಂದರು.ಇಡೀ ದೇಶದಲ್ಲಿ ಮೊಟ್ಟ ಮೊದಲನೆಯ ಜನಗಣತಿ ಮಾಡಿದ್ದು ಕರ್ನಾಟಕ. ನಾಲ್ವಡಿ ಕೃಷ್ಣರಾಜ ಒಡೆಯರ್‌ 1918ರಲ್ಲೇ ಜನಗಣತಿ ನಡೆಸಿ ಮೀಸಲಾತಿ ತಂದರು. ಅಂತಹ ರಾಜ್ಯದಲ್ಲಿ ನಾವೇಕೆ ಭಯ ಪಡಬೇಕು. ಇದರಲ್ಲಿ ಸ್ಪಷ್ಟತೆ ಬೇಕು ಅಷ್ಟೇ ಎಂದು ಹೇಳಿದರು.ವರದಿ ಜಾರಿಗೆ ಹಿಂಜರಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್‌, ಅದನ್ನು ಸರ್ಕಾರದಲ್ಲಿ ಇರುವವರನ್ನು ಕೇಳಿದರೆ ಒಳ್ಳೆಯದು. ಚುನಾವಣೆ ಇದೆಯೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ನಾವು ಮಾಡಿರುವ ವರದಿ ಜಾರಿಗೆ ಬರಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿ ವರದಿ ಬಗ್ಗೆ ಮುಖ್ಯಮಂತ್ರಿಗಳು ಎಚ್ಚರ ವಹಿಸಬೇಕು ಎಂಬ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್‌, ಮೊದಲು ಅವರು ಪಕ್ಷದ ಪ್ರಣಾಳಿಕೆ ಓದಲಿ. ಅವರು ಪ್ರಣಾಳಿಕೆ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಭರವಸೆ, ಇದು ರಾಹುಲ್‌ಗಾಂಧಿ ಅವರ ಕಾರ್ಯಕ್ರಮ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಗ್ಗೆ ಗೌರವ, ರಾಹುಲ್‌ಗಾಂಧಿ ವಿಚಾರಗಳಿಗೆ ಗೌರವ ಕೊಡುವವರೆಲ್ಲರೂ ಜಾತಿಗಣತಿ ವರದಿ ಬೆಂಬಲಿಸಬೇಕು ಎಂದು ತೀಕ್ಷ್ಣವಾಗಿ ಹೇಳಿದರು.